Home Crime 121 ನಕಲಿ ಬ್ಯಾಂಕಿಂಗ್ ಆ್ಯಪ್ ತಯಾರಿ, ₹64.38 ಕೋಟಿ ವಂಚನೆ : 17 ವರ್ಷದ ಬಾಲಕ...

121 ನಕಲಿ ಬ್ಯಾಂಕಿಂಗ್ ಆ್ಯಪ್ ತಯಾರಿ, ₹64.38 ಕೋಟಿ ವಂಚನೆ : 17 ವರ್ಷದ ಬಾಲಕ ಪೊಲೀಸ್ ವಶಕ್ಕೆ…!!

ಸೂರತ್ : ಕೃತಕ ಬುದ್ಧಿಮತ್ತೆ (AI) ಮತ್ತು ಟೆಲಿಗ್ರಾಂ ಬಳಸಿ ಬರೋಬ್ಬರಿ 121 ನಕಲಿ ಬ್ಯಾಂಕಿಂಗ್ ಆ್ಯಪ್‌ ಗಳನ್ನು ತಯಾರಿಸಿ, ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ 17 ವರ್ಷದ ಯುವಕನನ್ನು ಸೂರತ್ ಸೈಬರ್ ಕ್ರೈಮ್ ಪೋಲಿಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದ 11ನೇ ತರಗತಿ ಡ್ರಾಪೌಟ್ ವಿದ್ಯಾರ್ಥಿ ರೋಹಿತ್ ವೀರೇಂದ್ರಸಿಂಗ್ ಶಾಕ್ಯ ಬಂಧಿತ ಆರೋಪಿ.

ಈತ ತಯಾರಿಸಿದ ನಕಲಿ ಆ್ಯಪ್‌ ಗಳಿಗೆ ಸಿಲುಕಿ ಇದುವರೆಗೆ 2,928 ಜನರು ಬರೋಬ್ಬರಿ 64.38 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ಆರೋಪಿ ರೋಹಿತ್, ಸೈಬರ್ ಅಪರಾಧಗಳಿಗೆ ಹೆಸರಾದ ಜಾರ್ಖಂಡ್‌ನ ಜಮ್ತಾರಾ, ಹರಿಯಾಣ ಹಾಗೂ ರಾಜಸ್ಥಾನದ ಸೈಬರ್ ಗ್ಯಾಂಗ್‌ಗಳಿಗೆ ನಕಲಿ APK ಫೈಲ್‌ಗಳನ್ನು ಸರಬರಾಜು ಮಾಡುತ್ತಿದ್ದ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಆಕ್ಸಿಸ್ ಬ್ಯಾಂಕ್, ಯುಸಿಒ ಬ್ಯಾಂಕ್‌ ಗಳ ಅಸಲಿ ಆ್ಯಪ್‌ ಗಳನ್ನೇ ಹೋಲುವ ನಕಲಿ ಆ್ಯಪ್‌ ಗಳನ್ನು ಈತ ರೂಪಿಸಿದ್ದ.

ಬ್ಯಾಂಕ್‌ಗಳಷ್ಟೇ ಅಲ್ಲದೆ ಬಿಗ್‌ಬಾಸ್ಕೆಟ್, ಅಮೆರಿಕನ್ ಎಕ್ಸ್‌ಪ್ರೆಸ್, ಪಿಎಂ ಕಿಸಾನ್ ಮತ್ತು ಆರ್‌ಟಿಒ ಚಲನ್ ಪಾವತಿಯ ನಕಲಿ ಆ್ಯಪ್‌ಗಳನ್ನು ಸೃಷ್ಟಿಸಿದ್ದ.

ಸಂತ್ರಸ್ತರ ಫೋನ್‌ನಲ್ಲಿ ಬರುವ OTP, ಬ್ಯಾಂಕಿಂಗ್ ವಿವರಗಳು ಹಾಗೂ ಇತರ ರಹಸ್ಯ ಮಾಹಿತಿಗಳನ್ನು ಸೈಬರ್ ಕಳ್ಳರು ನೇರವಾಗಿ ನೋಡುವಂತಹ ತಂತ್ರಜ್ಞಾನವನ್ನು ಆ್ಯಪ್‌ನಲ್ಲಿ ಅಳವಡಿಸಿದ್ದ.

ಸೈಬರ್ ಅಪರಾಧಿಗಳಿಗೆ ಇಂತಹ ಕಸ್ಟಮೈಸ್ಡ್ ಮಾಲ್‌ವೇರ್ ಆ್ಯಪ್‌ಗಳನ್ನು ನೀಡಲು ತಿಂಗಳಿಗೆ 15,000 ರೂ. ಬಾಡಿಗೆ ವಸೂಲಿ ಮಾಡುತ್ತಿದ್ದ.

ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ಬಂದ PNB One ಆ್ಯಪ್‌ನಂತಹ ನಕಲಿ APK ಲಿಂಕ್ ಒಂದನ್ನು ಅಸಲಿ ಎಂದು ನಂಬಿ ಡೌನ್‌ಲೋಡ್ ಮಾಡಿಕೊಂಡ ವ್ಯಕ್ತಿಯೊಬ್ಬರು ತಮ್ಮ ಖಾತೆಯಿಂದ 5 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಈ ಕುರಿತು ಸೂರತ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸೈಬರ್ ಪೊಲೀಸರು, ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕಾನ್ಪುರದ ಹೋಟೆಲೊಂದರಲ್ಲಿದ್ದ ಆರೋಪಿ ರೋಹಿತ್‌ನನ್ನು ಬಂಧಿಸಿದ್ದಾರೆ. ಆತನಿಂದ ಹಲವಾರು ಮೊಬೈಲ್ ಫೋನ್‌ಗಳು ಹಾಗೂ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.