ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ರಂಗ ಶಿಕ್ಷಣ ತರಬೇತಿಯನ್ನು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸುಮಾರು 25 ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ.
ಈ ಯೋಜನೆಗೆ ಸಂಘಸoಸ್ಥೆಗಳು ಹಾಗೂ ದಾನಿಗಳು ಕೈ ಜೋಡಿಸಬೇಕು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಗುರುವಾರ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ರಂಗೋತ್ಸವ ಕಾರ್ಯಕ್ರಮದಲ್ಲಿ 2025ರ ಡಿ.4ರಿಂದ 15ರವರೆಗೆ ನಡೆದಿದ್ದ ದಿ. ಡಾ. ಟಿಎಂಎ ಪೈ, ದಿ.ಎಸ್. ಎಲ್. ನಾರಾಯಣ ಭಟ್ ಹಾಗೂ ದಿ. ಮಲ್ಪೆ ಮಧ್ವರಾಜ್ ಸ್ಮಾರಕ 46ನೇ ವರ್ಷದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುಮಾನ ವಿತರಿಸಿ ಮಾತನಾಡಿದ ಹಿರಿಯ ರಂಗಕರ್ಮಿ ನಟರಾಜ ದೀಕ್ಷಿತ್ ಅವರು 60-70ರ ದಶಕಗಳಲ್ಲಿ ಅಂದಿನ ರಂಗಭೂಮಿಯ ಸ್ಥಿತಿಗತಿ, ಆನಂದ ಗಾಣಿಗರಿಂದ ರಂಗಭೂಮಿ ಉಡುಪಿ ಸಂಸ್ಥೆಯ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿ, ಜೀವನದಲ್ಲಿ ನಾಟಕ ಮಾಡುವುದಕ್ಕಿಂತ ನಾಟಕದಲ್ಲಿ ಜೀವನ ಹುಡುಕುವುದು ಇಂದಿನ ಅಗತ್ಯವಿದೆ ಎಂದರು.
ಅದಾನಿ ಪವರ್‌ನ ಅಧ್ಯಕ್ಷ ಕಿಶೋರ್ ಆಳ್ವ ಅವರು ರಂಗಭೂಮಿ ಉಡುಪಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಅದಾನಿ ಪವರ್ ತನ್ನ ಸಿಎಸ್‌ಆರ್ ನಿಧಿಯಿಂದ ನಾಟಕ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ರಂಗಕ್ಕೆ ನೆರವು ನೀಡುತ್ತಿದೆ. ರಂಗಭೂಮಿಯ ಕಾರ್ಯಚಟುವಟಿಕೆಗಳಿಗೂ ತಮ್ಮ ಪ್ರೋತ್ಸಾಹ ನೀಡುವ ಭರವಸೆ ನೀಡಿದರು.
ಬಹುಮಾನ ವಿತರಣೆ : ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಸುಮನಸಾ ಕೊಡವೂರು ತಂಡದ ‘ಈದಿ’ ನಾಟಕದ ತಂಡಕ್ಕೆ 35,000ರೂ. ನಗದು ಹಾಗೂ ಸ್ಮರಣಿಕೆ, ಟಿಎಂಎ ಪೈ ಸ್ಮಾರಕ ಪರ್ಯಾಯ ಫಲಕ, ದ್ವಿತೀಯ ಬಹುಮಾನ ಪಡೆದ ಬೆಂಗಳೂರಿನ ಕ್ರಾನಿಕಲ್ಸ್ ಆಫ್ ಇಂಡಿಯಾ ತಂಡದ `ಶಿವೋಹಂ’ ನಾಟಕಕ್ಕೆ 25,000 ರೂ. ನಗದು, ಸ್ಮರಣಿಕೆ ಹಾಗೂ ತೃತೀಯ ಬಹುಮಾನ ಗೆದ್ದ ಸಾಗರದ ಸ್ಪಂದನಾ ತಂಡದ ‘ಪ್ರಾಣ ಪದ್ಮಿನಿ ‘ ನಾಟಕಕ್ಕೆ 15,000 ರೂ. ನಗದು ಮತ್ತು ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೇಷ್ಠ ನಿರ್ದೇಶನ, ಶ್ರೇಷ್ಠ ನಟ, ನಟಿ ಸೇರಿದಂತೆ ವೈಯುಕ್ತಿಕ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಜಿಎo ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಶ್ವನಾಥ ಪೈ ಎಂ., ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ರಂಗಭೂಮಿ ಸಂಸ್ಥೆಯ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿ, ಜಿ.ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು. ಸುಬ್ರಮಣ್ಯ ಶೇರ್ವೆಗಾರ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಬಹುಮಾನ ಪಡೆದ ಸುಮನಾಸಾ ಕೊಡವೂರು ತಂಡದ ‘ಈದಿ’ ನಾಟಕದ ಮರು ಪ್ರದರ್ಶನಗೊಂಡಿತು.



