ಪುತ್ತೂರು : ಕುಂಬ್ರ–ಬೆಳ್ಳಾರೆ ರಸ್ತೆಯ ತ್ಯಾಜ್ಯನಗರ ಪ್ರದೇಶದಲ್ಲಿ ಮಂಗಳವಾರ (ಮಾ. 3) ರಾತ್ರಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
ಕುಂಬ್ರ ಶಾಲೆ ಸಮೀಪ ನಿವಾಸಿಯಾಗಿದ್ದ ಭುವನ್ (33) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಅವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ.
ನಿಂತಿಕಲ್ಲಿನ ಬಾರ್‌ನಲ್ಲಿ ಉದ್ಯೋಗದಲ್ಲಿದ್ದ ಭುವನ್ ಅವರು ಮಂಗಳವಾರ ರಜೆ ಹಿನ್ನೆಲೆಯಲ್ಲಿ ಕೆಯ್ಯರು ಭಾಗಕ್ಕೆ ತೆರಳಿದ್ದರು. ಅಲ್ಲಿಂದ ಮನೆಗೆ ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಮೃತರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಘಟನೆ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



