Home Crime ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟ ಬೆದರಿಕೆ : ಭಟ್ಕಳ ಮೂಲದ ವ್ಯಕ್ತಿ ಬಂಧನ…!!

ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟ ಬೆದರಿಕೆ : ಭಟ್ಕಳ ಮೂಲದ ವ್ಯಕ್ತಿ ಬಂಧನ…!!

ಮಂಗಳೂರು, ಮಾ. 4: ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಗೊಳಿಸುವುದಾಗಿ ಬೆದರಿಕೆ ಸಂದೇಶ ಹಾಕಿದ್ದ ಆರೋಪಿಯನ್ನು ಉಳ್ಳಾಲ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತನನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ದೇವಿನಗರ ನಿವಾಸಿ ಶಂಕರ್ ಮಸ್ತಪ್ಪ ಮೊಗೇರ್ (35) ಎಂದು ಗುರುತಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ನೀಡಿದ ಮಾಹಿತಿಯಂತೆ, ಇನ್‌ಸ್ಟಾಗ್ರಾಂನಲ್ಲಿ ಇತರೊಬ್ಬರು ಹಂಚಿಕೊಂಡಿದ್ದ ಪೋಸ್ಟ್‌ಗೆ ‘shankar11916’ ಎಂಬ ಖಾತೆಯಿಂದ “ಸಪೋರ್ಟ್ ಮಾಡಿ, ಟ್ರೋ ಉಳ್ಳಾಲ ಮಸೀದಿ ಹತ್ತಿರ ಬಾಂಬ್ ಬ್ಲಾಸ್ಟ್ ಮಾಡ್ತೀನಿ” ಎಂಬ ಅರ್ಥದ ಬೆದರಿಕೆ ಕಾಮೆಂಟ್ ಮಾಡಲಾಗಿತ್ತು. ಈ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆತಂಕ ಸೃಷ್ಟಿಸಿತ್ತು.

ಘಟನೆಯ ಗಂಭೀರತೆಯನ್ನು ಪರಿಗಣಿಸಿ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ತನಿಖೆ ಆರಂಭಿಸಿದರು. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.