ಉಡುಪಿ: ಉಡುಪಿ ತಾಲೂಕಿನ ಮೂಡನಿಡಂಬೂರು ಗ್ರಾಮದ ಬನ್ನಂಜೆಯಲ್ಲಿರುವ ತಹಶೀಲ್ದಾರ್ ಕಚೇರಿ ಸಂಕೀರ್ಣದ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ರಮವಾಗಿ ಕಡತಗಳನ್ನು ಸಂಗ್ರಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಿರ್ಯಾದಿದಾರರಾದ ಹಾಲಮೂರ್ತಿ ರಾವ್ ವಿ.ಎಸ್., ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಉಡುಪಿ ಇವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಫೆಬ್ರವರಿ 27ರಂದು ಗೌರವಾನ್ವಿತ ಉಪಲೋಕಾಯುಕ್ತರು, ಬೆಂಗಳೂರು ಅವರು ಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ.
ಹೊರಗುತ್ತಿಗೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕೇಶ್ ಅವರ ವೈಯಕ್ತಿಕ ಬ್ಯಾಗ್‌ನಲ್ಲಿ 8 ಕಡತಗಳು ಹಾಗೂ ಸುನೀಲ್ ಅವರ ಬ್ಯಾಗ್‌ನಲ್ಲಿ 35 ಕಡತಗಳು ಪತ್ತೆಯಾಗಿವೆ. ಒಟ್ಟು 43 ಕಡತಗಳು ಆಸ್ತಿ ಮತ್ತು ಮದುವೆ ನೋಂದಣಿ ಸಂಬಂಧಿತವಾಗಿದ್ದು, ಅವುಗಳನ್ನು ಕಚೇರಿಯ ಇನ್‌ವರ್ಡ್ ರಿಜಿಸ್ಟರ್‌ನಲ್ಲಿ ದಾಖಲಿಸದೇ ಅನಧಿಕೃತವಾಗಿ ವೈಯಕ್ತಿಕ ಬ್ಯಾಗ್‌ಗಳಲ್ಲಿ ಇಟ್ಟುಕೊಂಡಿರುವುದು ಕಂಡುಬಂದಿದೆ.
ಇದಲ್ಲದೆ ಆರೋಪಿತರು ಸಾರ್ವಜನಿಕರೊಂದಿಗೆ ಸರ್ಕಾರಿ ನೌಕರರಂತೆ ವರ್ತಿಸಿರುವುದೂ ತನಿಖೆಯಲ್ಲಿ ತಿಳಿದುಬಂದಿದೆ. ಕಚೇರಿಯ ಹಿರಿಯ ಉಪನೋಂದಣಾಧಿಕಾರಿ ಗಿರೀಶ್ ಅವರ ಗಮನಕ್ಕೆ ಈ ವಿಚಾರ ಬಾರದಿರುವುದು ಅಥವಾ ಅವರ ಕುಮ್ಮಕ್ಕಿನಿಂದಲೇ ಈ ಕೃತ್ಯ ನಡೆದಿರುವ ಶಂಕೆಯೂ ವ್ಯಕ್ತವಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.



