ಬೈಂದೂರು: ಪಿತ್ರಾರ್ಜಿತ ಅಸ್ತಿಯ ವಿಚಾರದಲ್ಲಿ ಕುಟುಂಬದೊಳಗಿನ ತಕರಾರು ಹಲ್ಲೆಗೆ ತಿರುಗಿದ ಘಟನೆ ಬೈಂದೂರಿನಲ್ಲಿ ನಡೆದಿದೆ.
ಪಾರ್ವತಿ ಶೆಟ್ಟಿ (43), ಗಂಡ ರಾಘವೇಂದ್ರ ಶೆಟ್ಟಿ, ಬ್ರಹ್ಮಲಿಂಗೇಶ್ವರ ನಿಲಯ, ಕಂಜೊಳ್ಳಿ, ಯಡ್ತರೆ ಗ್ರಾಮ ನಿವಾಸಿಗಳು. ಇವರಿಗೂ ಪ್ರಥ್ವಿರಾಜ್ ಶೆಟ್ಟಿಯವರ ತಂದೆ ಹೆರಿಯಣ್ಣ ಶೆಟ್ಟಿಯವರಿಗೂ ಪಿತ್ರಾರ್ಜಿತ ಜಾಗದ ವಿಚಾರದಲ್ಲಿ ದೀರ್ಘಕಾಲದಿಂದ ವಿವಾದವಿದ್ದು, ಜಾಗದ ಹಕ್ಕು ಕುರಿತು ಮಾನ್ಯ ನ್ಯಾಯಾಲಯದಲ್ಲಿ ದಾವೆ ದಾಖಲಾಗಿರುವುದಾಗಿ ತಿಳಿದುಬಂದಿದೆ.
ದಿನಾಂಕ 27/02/2026 ರಂದು ಬೆಳಿಗ್ಗೆ 7:30 ಗಂಟೆ ಸುಮಾರಿಗೆ ಪಾರ್ವತಿ ಶೆಟ್ಟಿ ತಮ್ಮ ಮನೆಯ ದನದ ಕೊಟ್ಟಿಗೆ ಬಳಿ ಕೆಲಸ ಮಾಡುತ್ತಿದ್ದ ವೇಳೆ, ಹೆರಿಯಣ್ಣ ಶೆಟ್ಟಿ ಅವರ ಪತ್ನಿ ಕಾವೇರಿ ಶೆಟ್ಟಿ ಹಾಗೂ ಮಕ್ಕಳಾದ ಪ್ರಥ್ವಿರಾಜ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಮತ್ತು ಜೆಸಿಬಿ ಚಾಲಕ ಒಟ್ಟಾಗಿ ಸೇರಿ ಜಾಗಕ್ಕೆ ಬಲವಂತವಾಗಿ ಪ್ರವೇಶಿಸಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜಾಗಕ್ಕೆ ನಾಯಿ ಏಕೆ ಬಿಡುತ್ತೀಯೆಂದು ಅವಾಚ್ಯ ಶಬ್ದಗಳಿಂದ ಬೈದು, ಹೆರಿಯಣ್ಣ ಶೆಟ್ಟಿ ಕೈಯಲ್ಲಿದ್ದ ದೊಣ್ಣೆಯಿಂದ ಪಾರ್ವತಿ ಶೆಟ್ಟಿಯವರ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದರೆಂದು ಆರೋಪಿಸಲಾಗಿದೆ. ಪ್ರಥ್ವಿರಾಜ್ ಮತ್ತು ಪ್ರಜ್ವಲ್ ಶೆಟ್ಟಿ ಪಿರ್ಯಾದಿದಾರರನ್ನು ಹಿಡಿದು ಎಳೆದು ಕೈಯಿಂದ ಬೆನ್ನು ಹಾಗೂ ಮುಖಕ್ಕೆ ಹಲ್ಲೆ ನಡೆಸಿದ್ದು, ಜೆಸಿಬಿ ಚಾಲಕ ಕಾಲಿನಿಂದ ತುಳಿದರೆಂದು ದೂರಿನಲ್ಲಿ ಹೇಳಲಾಗಿದೆ.
ಇದಲ್ಲದೆ, ಜಾಗದ ವಿಚಾರದಲ್ಲಿ ಜಗಳಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಮತ್ತೊಮ್ಮೆ ಕೊವಿಯಿಂದ ಕೊಲೆ ಮಾಡುವುದಾಗಿ ಹೆರಿಯಣ್ಣ ಶೆಟ್ಟಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಜಾಗದ ಪಾಲು ಹಾಗೂ ಸಾಕು ನಾಯಿ ವಿಚಾರದಲ್ಲಿ ಇದ್ದ ದ್ವೇಷವೇ ಈ ಕೃತ್ಯಕ್ಕೆ ಕಾರಣವೆಂದು ಶಂಕಿಸಲಾಗಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



