Home Crime ವಿಟ್ಲ : ಮೈತ್ರೇಯಿ ಗುರುಕುಲದ 10 ನೇ ತರಗತಿ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ…!!

ವಿಟ್ಲ : ಮೈತ್ರೇಯಿ ಗುರುಕುಲದ 10 ನೇ ತರಗತಿ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ…!!

ವಿಟ್ಲ: ಇಲ್ಲಿನ ಕೊಡಂಗಾಯಿ ಸಮೀಪದ ಮೂರುಕಜೆ ಎಂಬಲ್ಲಿರುವ ಮೈತ್ರೇಯಿ ಗುರುಕುಲ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳ ಮೃತದೇಹವು ಶಾಲಾ ಆವರಣದ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.

ಮೃತ ವಿದ್ಯಾರ್ಥಿನಿಯನ್ನು ಬೆಂಗಳೂರು ಮೂಲದ ವೈಗ ಲಕ್ಷ್ಮಿ ಎಂದು ಗುರುತಿಸಲಾಗಿದೆ.

ಈಕೆ ಈ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ರವಿವಾರದಿಂದಲೇ ಈಕೆ ನಾಪತ್ತೆಯಾಗಿದ್ದು, ಆಡಳಿತ ಮಂಡಳಿ ಹಾಗೂ ಸಂಬಂಧಿಕರು ಹುಡುಕಾಟ ನಡೆಸುತ್ತಿದ್ದರು ಎನ್ನಲಾಗಿದೆ.

ನಾಪತ್ತೆಯಾದ ವಿದ್ಯಾರ್ಥಿನಿಗಾಗಿ ತೀವ್ರ ಶೋಧ ನಡೆಸಿದಾಗ, ಗುರುಕುಲದ ಆವರಣದ ಬಳಿಯಿರುವ ಕೆರೆಯಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ‘ಫ್ರೆಂಡ್ಸ್ ವಿಟ್ಲ’ದ ಮುರಳೀಧರ ಮತ್ತು ತಂಡದವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಲು ಸಹಕರಿಸಿದ್ದಾರೆ.

ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.