ಉಪ್ಪುಂದ/ಬೈಂದೂರು: ಮೀನುಗಾರ ಸಮಾಜದ ಅಗ್ರಗಣ್ಯ ನಾಯಕ, ಸಮಾಜಸೇವಕ ಹಾಗೂ ಶುದ್ಧ ರಾಜಕೀಯದ ಪ್ರತೀಕವಾಗಿದ್ದ ಕೆ. ಮುತ್ತಯ್ಯ ಖಾರ್ವಿ ಅವರು ವಿಧಿವಶರಾಗಿದ್ದಾರೆ. ಅವರ ಅಗಲಿಕೆಯಿಂದ ಮೀನುಗಾರ ಸಮುದಾಯಕ್ಕೆ ಅಪಾರ ನಷ್ಟ ಉಂಟಾಗಿದೆ.
ಸಮಾಜದ ಹಿತವನ್ನೇ ಧ್ಯೇಯವನ್ನಾಗಿಸಿಕೊಂಡಿದ್ದ ಮುತ್ತಯ್ಯ ಖಾರ್ವಿ ಅವರು ನಿಸ್ವಾರ್ಥ ಸಮಾಜಸೇವೆಯ ಮೂಲಕ ಜನಮನಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು. ಅನಾರೋಗ್ಯಕ್ಕೆ ಒಳಗಾದ ಅನೇಕ ಮೀನುಗಾರರನ್ನು ರಾಜ್ಯ ಹಾಗೂ ಹೊರರಾಜ್ಯದ ಆಸ್ಪತ್ರೆಗಳಿಗೆ ಕರೆದೊಯ್ಯಿಸಿ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿದ ಅವರ ಸೇವೆ ಅಮೂಲ್ಯವಾಗಿದೆ.
ಅವರು ಕರ್ನಾಟಕ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಕಾರ್ಯದರ್ಶಿಯಾಗಿ, ಭಾರತೀಯ ಜನತಾ ಪಾರ್ಟಿ ಮುಖಂಡರಾಗಿ, ಉಪ್ಪುಂದ ಪಂಚಾಯತ್ ಉಪಾಧ್ಯಕ್ಷರಾಗಿ, ನಾಡ ದೋಣಿ ಮೀನುಗಾರರ ಸಂಘ ಬೈಂದೂರು ವಲಯದ ಅಧ್ಯಕ್ಷರಾಗಿ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಓಲಗ ಮಂಟಪದ ಅಧ್ಯಕ್ಷರಾಗಿ ಸೇರಿದಂತೆ ಊರಿನ ಅನೇಕ ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಎಲ್ಲರನ್ನು ಒಗ್ಗೂಡಿಸಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದ ಅವರು “ಅಜಾತ ಶತ್ರು” ಎಂಬ ಬಿರುದಿಗೆ ತಕ್ಕವರಾಗಿದ್ದರು. ಸಮಾಜದ ಎಲ್ಲ ವರ್ಗಗಳೊಂದಿಗೆ ಬೆರೆತು ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ ಅವರು, ಶಿಕ್ಷಣ, ಸಂಘಟನೆ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ದೂರದೃಷ್ಟಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು.



