Home Crime ಮೀನು ವ್ಯಾಪಾರಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಸುಲಿಗೆ : ಓರ್ವ ಆರೋಪಿ ಬಂಧನ…!!

ಮೀನು ವ್ಯಾಪಾರಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಸುಲಿಗೆ : ಓರ್ವ ಆರೋಪಿ ಬಂಧನ…!!

ಉಡುಪಿ : ಮಲ್ಪೆ ಬಂದರು ಸಮೀಪ ಖಾರದ ಪುಡಿ ಎರಚಿ ಮೀನು ವ್ಯಾಪಾರಿಗೆ ಹಲ್ಲೆ ಮಾಡಿ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನಿವಾಸಿ, ಪ್ರಸ್ತುತ ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಮುತ್ತಣ್ಣ (20) ಬಂಧಿತ ಆರೋಪಿ.

ದಯಾನಂದ ಕುಂದರ್ ಅವರು ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ಶೌಚಾಲಯಕ್ಕೆ ಹೋಗಿ ವಾಪಸ್ಸು ಬಂದರು ಕಡೆಗೆ ಬರುತ್ತಿದ್ದಾಗ ಆರೋಪಿ ಮುತ್ತಣ್ಣ ಮೀನಿನ ಬಗ್ಗೆ ವಿಚಾರಿಸಿ, ಸುಲಿಗೆ ಮಾಡುವ ಉದ್ದೇಶದಿಂದ ದಯಾನಂದ ಕುಂದ‌ರ್ ಅವರ ಮುಖಕ್ಕೆ ಖಾರದ ಪುಡಿ ಎರಚಿ, ಸ್ವಲ್ಪ ದೂರ ಎಳೆದೊಯ್ದಿದ್ದಾನೆ.

ಬಳಿಕ ಇನ್ನಿಬ್ಬರು ಆರೋಪಿಗಳು ಸೇರಿ, ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಡಲು ಒತ್ತಾಯಿಸಿದ್ದಾರೆ.

ಕೊಡದಿದ್ದಾಗ ಮೂವರು ಸೇರಿ ಹಲ್ಲೆ ನಡೆಸಿ, ಅಂದಾಜು ₹6 ಲಕ್ಷ ಮೌಲ್ಯದ ಸುಮಾರು 6 ಪವನ್‌ (37.570 ಗ್ರಾಂ) ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಅಲ್ಲದೆ, ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಂದುಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಗೆ ಇಳಿದ ಪೊಲೀಸರು ಆರೋಪಿ ಮುತ್ತಣ್ಣನನ್ನು‌ ಬಂಧಿಸಿ, ಸುಲಿಗೆ ಮಾಡಿದ 37.570 ಗ್ರಾಂ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು‌ ಬಲೆ ಬೀಸಿದ್ದಾರೆ.