Home Crime ಮಲತಾಯಿ ಮಗನ ಕೊಲೆಗೈದ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ…!!

ಮಲತಾಯಿ ಮಗನ ಕೊಲೆಗೈದ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ…!!

ದಾವಣಗೆರೆ : ಆಸ್ತಿ ಪಾಲು ವಿಭಾಗದ ವೈಷಮ್ಯದಿಂದ ಮಲತಾಯಿ ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಜೈಲು ಶಿಕ್ಷೆ ಹಾಗೂ 25ಸಾ. ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಶಿಕ್ಷೆಗೊಳಗಾದ ಅಪರಾಧಿಗಳು ಹರಿಹರ ನಗರದ ನಿವಾಸಿಗಳಾದ ರಾಜು ಕೆ. (25) ಮತ್ತು ಮಾರುತಿ ಜಿ.ಕೆ ಎಂದು ತಿಳಿದು ಬಂದಿದೆ.

ಹರಿಹರ ನಗರದ ಗುಡ್ಡಪ್ಪ ಎಂಬವರಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿಯ ಪುತ್ರ ಕುಮಾರ ಕೆ.ಜಿ ಹಾಗೂ ಎರಡನೇ ಪತ್ನಿಯ ಪುತ್ರರಾದ ರಾಜು ಮತ್ತು ಮಾರುತಿ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಮನಸ್ತಾಪವಿತ್ತು. ಇದೇ ದ್ವೇಷದಿಂದ 2023ರ ಮೇ 14ರಂದು ಆರೋಪಿಗಳಿಬ್ಬರೂ ಕುಮಾರನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.

ಈ ಕುರಿತು ಮೃತರ ಪತ್ನಿ ಲಕ್ಷ್ಮಿ ಎಸ್. ಅಲಿಯಾಸ್ ರೇಖಾ ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಪೊಲೀಸ್ ನಿರೀಕ್ಷಕ ಎಸ್. ದೇವಾನಂದ್‌ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವ‌ರ್ ಅವರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ.25ರಂದು ಈ ತೀರ್ಪು ಪ್ರಕಟಿಸಿದ್ದಾರೆ.

ದಂಡದ ಮೊತ್ತದಲ್ಲಿ 15ಸಾ. ರೂ.ವನ್ನು ಸಂತ್ರಸ್ತ ಕುಟುಂಬಕ್ಕೆ ಹಾಗೂ ಉಳಿದ 10 ಸಾ. ರೂ.ವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.