ಉಡುಪಿ: ಕಾಪು ಬೀಚ್ನಲ್ಲಿ ರವಿವಾರ ಸಮುದ್ರ ಪಾಲಾಗಿದ್ದ ಇಬ್ಬರ ಪೈಕಿ ಓರ್ವನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಮೃತರನ್ನು ಶಿವಮೊಗ್ಗ ಜಿಲ್ಲೆಯ ಮಾವಿನಕೊಪ್ಪ ಹೊಸನಗರ ನಿವಾಸಿ ಅಲ್ತಾಫ್ ಎಂಬವರ ಮಗ ಸಮೀರ್(20) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ದಾವಣಗೆರೆಯ ಅಹಮ್ಮದಿ ನಗರದ ನಿವಾಸಿ ಝಿಯಾವುಲ್ಲಾ ಎಂಬವರ ಮಗ ಮಲ್ಲಿಕ್ ರಿಹಾನ್(15) ಗಾಗಿ ಶೋಧ ಕಾರ್ಯ ಮುಂದುವರೆದಿದೆ.
ದಾವಣಗೆರೆಯಿಂದ ಕಾಪು ಬೀಚ್ಗೆ ವಿಹಾರಕ್ಕೆ ಬಂದಿದ್ದ 12 ಮಂದಿ ಪೈಕಿ ಐವರು ಯುವಕರು ಸಮುದ್ರಕ್ಕೆ ಇಳಿದು ಈಜುತ್ತಿದ್ದರು. ಇವರಲ್ಲಿ ಮೂವರು ಸಮುದ್ರ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಜೀವ ರಕ್ಷಕ ದಳದ ಸಿಬ್ಬಂದಿಗಳು ಮೂವರಲ್ಲಿ ಓರ್ವನನ್ನು ರಕ್ಷಿಸಿದರು.



