Home Crime ಹೊಸಕೋಟೆ: ಆಶ್ರಯ ಯೋಜನೆ ಜಾಗದ ವಿವಾದಕ್ಕೆ ಗುಂಡೇಟು : 25 ವರ್ಷದ ಯುವಕ ಸಾವು :...

ಹೊಸಕೋಟೆ: ಆಶ್ರಯ ಯೋಜನೆ ಜಾಗದ ವಿವಾದಕ್ಕೆ ಗುಂಡೇಟು : 25 ವರ್ಷದ ಯುವಕ ಸಾವು : ಆರೋಪಿ ಬಂಧನ…!!

ಬೆಂಗಳೂರು: ಹೊಸಕೋಟೆ ತಾಲೂಕಿನ ಸೋಲೂರು ಗ್ರಾಮದಲ್ಲಿ ಆಶ್ರಯ ಯೋಜನೆ ಜಾಗದ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನೊಬ್ಬ ಗುಂಡೇಟಿಗೆ ಬಲಿಯಾದ ಘಟನೆ ಸಂಭವಿಸಿದೆ.

ಮೃತ ಯುವಕನನ್ನು ಲಿಖಿತ್ ಗೌಡ (25) ಎಂದು ತಿಳಿಯಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಮೇಶ್ ಎಂಬಾತನನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಬಡವರಿಗೆ ನಿವೇಶನ ಹಂಚಿಕೆ ಮಾಡಲು ಮಂಜೂರಾಗಿದ್ದ 3 ಎಕರೆ 25 ಗುಂಟೆ ಜಾಗಕ್ಕೆ ಸಂಪರ್ಕ ಕಲ್ಪಿಸುವ 10 ಗುಂಟೆ ಜಾಗವನ್ನು ರಮೇಶ್ ಒತ್ತುವರಿ ಮಾಡಿಕೊಂಡಿದ್ದ ಎನ್ನಲಾಗಿದೆ. ಒಂದು ವಾರದ ಹಿಂದೆಯೇ ಸರ್ವೆ ನಡೆಸಿ ಗಡಿ ಕಲ್ಲು ನೆಡಲಾಗಿತ್ತು ಮತ್ತು ಅದಕ್ಕೆ ರಮೇಶ್ ಕೂಡ ಒಪ್ಪಿಗೆ ನೀಡಿದ್ದ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಜಾಗವನ್ನು ಸಮತಟ್ಟು ಮಾಡಿ ಸ್ವಚ್ಛಗೊಳಿಸಲು ಜೆಸಿಬಿ ಸಮೇತ ಸ್ಥಳಕ್ಕೆ ತೆರಳಿದಾಗ, ರಮೇಶ್ ತನ್ನ ಬಳಿಯಿದ್ದ ಡಬಲ್ ಬ್ಯಾರಲ್ ಗನ್ ತಂದು ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಬಡವರಿಗೆ ನಿವೇಶನ ನೀಡುವ ಉದ್ದೇಶದಿಂದ ಈ ಕೆಲಸ ನಡೆಯುತ್ತಿದೆ ಎಂದು ತಿಳಿಹೇಳಿದರೂ ಒಪ್ಪದ ಆತ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ನಂತರ ಅಲ್ಲಿಂದ ಸುಮಾರು 50 ಮೀಟರ್ ದೂರದಲ್ಲಿರುವ ಮನೆಯೊಳಗೆ ಹೋದ ರಮೇಶ್, ಮನೆಯ ಮುಂದೆ ನಿಂತು ವಿಡಿಯೋ ಮಾಡುತ್ತಿದ್ದ ಲಿಖಿತ್ ಗೌಡ ಮೇಲೆ ಕಿಟಕಿಯಿಂದ ಗುಂಡು ಹಾರಿಸಿದ್ದಾನೆ. ಹೊಟ್ಟೆಯ ಮೇಲ್ಭಾಗಕ್ಕೆ ಗುಂಡು ತಗುಲಿ ಲಿಖಿತ್ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ವೇಳೆ ಬಂದೂಕಿನ ನಳಿಕೆ ಹಿಡಿದ ಭರತ್ ಕೈಗೆ ಗಾಯವಾಗಿದ್ದು, ಕೆಂಪರಾಜು ಅವರ ಕೆನ್ನೆಯ ಮೇಲ್ಭಾಗದಲ್ಲೂ ಗುಂಡು ಹಾದುಹೋಗಿದೆ. ಇವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧಿಸಿದಂತೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೊಲೆ ಪ್ರಕರಣವನ್ನು ‌ವಿಚಾರಣೆ ನಡೆಸುತ್ತಿದ್ದಾರೆ.