ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಗೂಡ್ಸ್ ರಿಕ್ಷಾ ಬಾಡಿಗೆ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.
ಫಿರ್ಯಾದಿದಾರರಾದ ಭಾಸ್ಕರ (47) ಕಣ್ ಕೂಡ್ಲು ಮನೆ, ಬೆಳ್ಳಾಲ ಗ್ರಾಮ, ಮೂಡುಮುಂದ ಅಂಚೆ, ಕುಂದಾಪುರ ರವರು ಬೆಳ್ಳಾಲ ಗ್ರಾಮದ ತಮ್ಮ ಮನೆಯ ಸಮೀಪ ಬ್ರಹ್ಮಲಿಂಗೇಶ್ವರ ಜನರಲ್ ಸ್ಟೋರ್ ಮತ್ತು ಫಾಸ್ಟ್ ಫುಡ್ ಅಂಗಡಿ ನಡೆಸಿಕೊಂಡಿದ್ದಾರೆ.
ದಿನಾಂಕ 25-11-2026 ರಂದು ಸಂಜೆ 4:30 ಗಂಟೆಗೆ ತಮ್ಮ ಸಂಬಂಧಿ ಸುಧಾಕರ್ ರವರಲ್ಲಿ ಚಪ್ಪಡಿ ಕಲ್ಲು ಸಾಗಿಸಲು ಗೂಡ್ಸ್ ರಿಕ್ಷಾವನ್ನು ಬಾಡಿಗೆಗೆ ಕೇಳಿಕೊಂಡಿದ್ದು, ಆತನು ಒಪ್ಪಿಕೊಂಡಿದ್ದನು. ಆದರೆ ಗೂಡ್ಸ್ ರಿಕ್ಷಾ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹೋಗದೇ ಇರುವ ಕಾರಣ ಫಿರ್ಯಾದಿದಾರರು ಸುಧಾಕರ್ ರವರಿಗೆ ಫೋನ್ ಕರೆ ಮಾಡಿದ್ದು, ಫೋನ್ ಸ್ವಿಚ್ ಆಫ್ ಇದ್ದ ಕಾರಣ ಸುಧಾಕರರವರ ಪತ್ನಿ ಸೃಷ್ಟಿರವರಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದರು.
ದಿನಾಂಕ 26-11-2026 ರಂದು ಬೆಳಿಗ್ಗೆ 9:15 ಗಂಟೆಗೆ ಆರೋಪಿ ಸುಧಾಕರನು ಫಿರ್ಯಾದಿದಾರರ ಅಂಗಡಿಗೆ ಬಂದು ಪತ್ನಿ ಸೃಷ್ಟಿರವರಿಗೆ ಫೋನ್ ಕರೆ ಮಾಡಿದ ವಿಚಾರವಾಗಿ ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರ ಮುಖಕ್ಕೆ, ತಲೆಗೆ ಕೈಯಿಂದ ಹೊಡೆದು, ನೆಲಕ್ಕೆ ಕೆಡವಿ ಕಾಲಿನಿಂದ ಬೆನ್ನಿಗೆ, ಎದೆಗೆ ತುಳಿದು ಗೂಡ್ಸ್ ರಿಕ್ಷಾದ ಜಾಕ್ ಲಿವರ್ನಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಸ್ಥಳದಲ್ಲಿದ್ದ ಸೀತಾರಾಮ ಆಚಾರಿ ರವರು ಸುಧಾಕರ್ನನ್ನು ತಡೆದು ಹೊರಗೆ ಕಳುಹಿಸಿದ್ದಾರೆ. ಈ ಘಟನೆಯಿಂದ ಗಾಯಗೊಂಡ ಫಿರ್ಯಾದಿದಾರರು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




