ಕಾರ್ಕಳ: ಉಡುಪಿ ಜಿಲ್ಲೆಯ ನಿರ್ಲಕ್ಷ್ಯದಿಂದ ಪಿಕಪ್ ವಾಹನ ಚಲಾಯಿಸಿ ಕಾರ್ಮಿಕನ ಸಾವಿಗೆ ಕಾರಣವಾದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆಯ ಜೆ.ಬಿ. ಕೊಕನಟ್ ಇಂಡಸ್ಟ್ರೀ ಬಳಿ ನಡೆದಿದೆ.
ಸಂಜೆ 5:30ಕ್ಕೆ KA20AB 6883 ನಂಬ್ರದ ಪಿಕಪ್ ವಾಹನವನ್ನು ಕಂಪನಿಯ ಹೊರಗಡೆ ನಿಲ್ಲಿಸಲಾಗಿತ್ತು. ಆರೋಪಿ ಪ್ರಸಾದ ಪೂಜಾರಿ ಯಾವುದೇ ಮುಂಜಾಗ್ರತೆ ವಹಿಸದೆ ಏಕಾಏಕಿ ವೇಗವಾಗಿ ಕಟ್ಟಡದ ಒಳಕ್ಕೆ ಚಲಾಯಿಸಿದ್ದಾನೆ. ಈ ವೇಳೆ ವಾಹನ ನಿಯಂತ್ರಣ ತಪ್ಪಿ ಕಟ್ಟಡದ ಒಳಗಿದ್ದ ದಿನೇಶ್ ಕುಮಾರ್ ಎಂಬುವವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ದಿನೇಶ್ ಕುಮಾರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿದಾಗ ದಿನೇಶ್ ಕುಮಾರ್ ಗಾಯದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.
ಈ ಬಗ್ಗೆ ಮೃತರ ಸಹೋದ್ಯೋಗಿ ಫಾಗು (36), ಜೀವರಾಜಿ, ಸಿದ್ದಾರ್ಥ ನಗರ, ರಾಮ್ವಾಪುರ, ಉತ್ತರ ಪ್ರದೇಶ ಮೂಲದವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.



