Home Crime POCSO ಪ್ರಕರಣ : ಮಲಯಾಳಂ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು…!!

POCSO ಪ್ರಕರಣ : ಮಲಯಾಳಂ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು…!!

ತ್ರಿಶೂರ್‌: ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮಲಯಾಳಂ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತ್ರಿಶೂರ್‌ ನ್ಯಾಯಾಲಯ ಆದೇಶಿಸಿದೆ.

2022ರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ತ್ರಿಶೂರ್‌ನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ-IIರ ವಿಶೇಷ ನ್ಯಾಯಾಧೀಶೆ ರಮ್ಯಾ ಮೆನನ್ ಅವರು, ಪೋಕ್ಸೋ ಕಾಯ್ದೆಯ ಸೆಕ್ಷನ್ 12 ಹಾಗೂ ಭಾರತೀಯ ದಂಡ ಸಂಹಿತೆ 1860ರ ಸೆಕ್ಷನ್ 509ರ ಅಡಿಯಲ್ಲಿ ರವಿಯನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ.

2022ರ ಜುಲೈ 4ರಂದು ಇಬ್ಬರು ಅಪ್ರಾಪ್ತ ಬಾಲಕಿಯರು ಶಾಲೆಯಿಂದ ತ್ರಿಶೂರ್‌ನ ಅರನಟ್ಟುಕರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ರವಿ ತನ್ನ ಕಾರಿನಲ್ಲಿ ಬಾಲಕಿಯರನ್ನು ಹಿಂಬಾಲಿಸಿದ್ದ. ಬಳಿಕ ಅಪಾರ್ಟ್‌ಮೆಂಟ್‌ನ ಕಾರು ನಿಲುಗಡೆ ಪ್ರದೇಶದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ.

ವಿಚಾರಣೆ ವೇಳೆ ಬಾಲಕಿಯರು ಶ್ರೀಜಿತ್ ರವಿಯನ್ನು ಗುರುತಿಸಿದ್ದರು. ಆದರೆ, ಚಲನಚಿತ್ರ ನಟನಾಗಿದ್ದರೂ ಮಕ್ಕಳು ಆತನ ಹೆಸರನ್ನು ಗುರುತಿಸಲು ವಿಫಲರಾಗಿದ್ದಾರೆ ಎಂದು ಗುರುತಿಸುವಿಕೆಯ ವಿಶ್ವಾಸಾರ್ಹತೆಯನ್ನು ರವಿಯ ಪರ ವಕೀಲರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಆದರೆ, ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಬಾಲಕಿಯರು ರವಿಯನ್ನು ಗುರುತಿಸಿದ್ದು, ಆತನ ದೈಹಿಕ ಚಹರೆಯ ಬಗ್ಗೆಯೂ ವಿವರಿಸಿದ್ದಾರೆ ಎಂದು ತಿಳಿಸಿದೆ. ವಿಚಾರಣೆಯ ವೇಳೆ ಪೊಲೀಸ್ ತನಿಖೆಯಲ್ಲಿನ ಲೋಪಗಳ ಬಗ್ಗೆಯೂ ನ್ಯಾಯಾಲಯ ಗಮನಿಸಿದೆ. ವಿಶೇಷವಾಗಿ, ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ವಿಫಲರಾಗಿರುವುದನ್ನು ಉಲ್ಲೇಖಿಸಿದೆ. ಆದರೂ, ಇಂತಹ ಲೋಪಗಳು ಬಾಲಕಿಯರು ನೀಡಿದ ಸಾಕ್ಷ್ಯಾಗಳ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.