Home Latest ಮೂಡುಬೆಳ್ಳೆ- ರುದ್ರಭೂಮಿಯಲ್ಲಿ ನಿಸ್ವಾರ್ಥ ಸೇವೆ *ಯಾವ ಹೊತ್ತಿನಲ್ಲೂ ಜನರ ನೆರವಿಗೆ ಸಿದ್ಧ ರಾಜು ಪಾಣಾರ..!!

ಮೂಡುಬೆಳ್ಳೆ- ರುದ್ರಭೂಮಿಯಲ್ಲಿ ನಿಸ್ವಾರ್ಥ ಸೇವೆ *ಯಾವ ಹೊತ್ತಿನಲ್ಲೂ ಜನರ ನೆರವಿಗೆ ಸಿದ್ಧ ರಾಜು ಪಾಣಾರ..!!

ಮೂಡುಬೆಳ್ಳೆ: ಗಾಳಿ ಮಳೆಯಿಂದ ರಸ್ತೆಯಲ್ಲಿ ಮರ ಬಿದ್ದು ಸಂಚಾರ ದುಸ್ತರವಾದಾಗ, ಮನೆಗೆ ಹಾನಿಯಾದಾಗ, ನೆರೆ ಬಂದಾಗ ಬೆಳ್ಳೆ- ಕಟ್ಟಿಂಗೇರಿ ಜನತೆಗೆ, ಗ್ರಾಮ ಪಂಚಾಯತ್‌ಗೆ, ಕಂದಾಯ, ಮೆಸ್ಕಾಂ ಇಲಾಖೆಗೆ ನೆನಪಾಗುವ ಮೊದಲ ಹೆಸರೇ ರಾಜು ಪಾಣಾರ ಮೂಡುಬೆಳ್ಳೆ. ಇವರನ್ನು ಪ್ರೀತಿಯಿಂದ ಜನರು ಶಕ್ತಿಮಾನ್ ಎಂದು ಕರೆಯುತ್ತಾರೆ. ಯಾವ ಹೊತ್ತಿನಲ್ಲೂ ಜನರ ಸೇವೆಗೆ ಲಭ್ಯವಿರುವ ರಾಜು ಅವರು ಮೂಡುಬೆಳ್ಳೆ ರುದ್ರಭೂಮಿಯ ಆರಂಭದಿಂದಲೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಇದರ ಅಧ್ಯಕ್ಷರಾಗಿರುವ ರಾಜು ಅವರು ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಹಕ್ಕುಗಳ ಸಮಿತಿಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಮದ್ಯಪಾನ ತೊರೆದು ಮಾದರಿ ಬದುಕು:ಕೆಲವು ವರ್ಷಗಳ ಹಿಂದೆ ಮದ್ಯಪಾನ ಮಾಡುತ್ತಿದ್ದ ರಾಜು ಅವರನ್ನು ಅವರ ಸ್ನೇಹಿತರು ಸೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರಕ್ಕೆ ದಾಖಲಿಸಿದ್ದರು. ಅವರು ಮದ್ಯಪಾನ ಬಿಡಲೊಪ್ಪದೆ ಶಿಬಿರದಿಂದ ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲೇ ಓಡಿ ಬಂದಿದ್ದರು. ಗಟ್ಟಿಮುಟ್ಟಾದ ರಾಜು ಅವರನ್ನು ಮತ್ತೆ ಶಿಬಿರಕ್ಕೆ ಸೇರಿಸಲು ಅವರ ಹಿತೈಷಿಗಳು ಹರ ಸಾಹಸ ಪಟ್ಟಿದ್ದರು. ಈ ಶಿಬಿರದ ಮೂಲಕ ಮದ್ಯಪಾನ ಮುಕ್ತರಾದ ಅವರು ಇಂದು ಕುಟುಂಬದೊಂದಿಗೆ ಸಂತೋಷದಿಂದ ಮಾದರಿ ಬದುಕು ನಡೆಸುತ್ತಿದ್ದಾರೆ. ಮದ್ಯಮುಕ್ತ ಮೂಡುಬೆಳ್ಳೆ ಅಭಿಯಾನದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಅನುಭವವನ್ನು ಸಂತೋಷದಿಂದ ಹಂಚಿಕೊಳ್ಳುತ್ತಾರೆ.

ಶ್ರಮಜೀವಿ: ದಿನವಿಡೀ ಶ್ರಮದ ದುಡಿಮೆಯ ರಾಜು ಅವರು, ಸಮಾಜ ಸೇವೆಯನ್ನೂ ಮಾಡುತ್ತಾ ಎಲ್ಲರಿಗೂ ಬೇಕಾದವರಾಗಿ ಬದುಕುತ್ತಿದ್ದು ಹಲವರಿಗೆ ಮದ್ಯಪಾನ ವ್ಯಸನದಿಂದ ಮುಕ್ತರಾಗಲು ಪ್ರೇರಣೆಯಾಗಿದ್ದಾರೆ.