Home Crime ಭೀಕರ ಅಪಘಾತದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ ಏಳು ಜನರ ಮೃತ್ಯು…!!

ಭೀಕರ ಅಪಘಾತದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ ಏಳು ಜನರ ಮೃತ್ಯು…!!

ಅಹ್ಮದಾಬಾದ್ : ಗುಜರಾತ್ ನ ಕಛ್ ಜಿಲ್ಲೆಯ ಭುಜ್-ಖಾವ್ಡಾ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾರು ಮತ್ತು ಟ್ರಕ್ ನಡುವಿನ ಮುಖಾಮುಖಿ ಢಿಕ್ಕಿಯಲ್ಲಿ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಮತ್ತು ಮೂವರು ಚಿಕ್ಕಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಉತ್ತರಾಖಂಡದ ಗಢ್ವಾಲ್ ಪ್ರದೇಶದ ಎರಡು ಕುಟುಂಬಗಳಿಗೆ ಸೇರಿದವರಾಗಿದ್ದಾರೆ.

ಶನಿವಾರ ರಾತ್ರಿ 9.30ರಿಂದ 10 ಗಂಟೆಯ ನಡುವೆ ಖಾವ್ಡಾದಿಂದ ಭುಜ್ ಕಡೆಗೆ ಪ್ರಯಾಣಿಸುತ್ತಿದ್ದ ಹ್ಯುಂಡೈ ಔರಾ ಕಾರು ಎದುರಿನಿಂದ ಖಾವ್ಡಾ ಕಡೆಗೆ ಬರುತ್ತಿದ್ದ ಟ್ರೈಲರ್ ಟ್ರಕ್‌ ಗೆ ಢಿಕ್ಕಿ ಹೊಡೆದಿದೆ.

ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಎಲ್ಲ ಏಳೂ ಮಂದಿ ಮೃತಪಟ್ಟಿದ್ದಾರೆ ಎಂದು ಕಛ್ (ಪಶ್ಚಿಮ) ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸುಂಡಾ ರವಿವಾರ ತಿಳಿಸಿದ್ದಾರೆ.

ಮೃತರನ್ನು ಸೌರಭ್ ಸಿಂಗ್ ನೇಗಿ, ಪತ್ನಿ ಸವಿತಾ, ಮೂರು ತಿಂಗಳ ಮಗು ಸಿವಿಕಾ; ರಾಜೇಶ್ ಸಿಂಗ್ ರಾವತ್, ಪುತ್ರಿ ರಕ್ಷಿತಾ; ಹಾಗೂ ರಿಂಕಿ ನಿತಿನ್ ಗೋಸಾಯಿ ಮತ್ತು ಅವರ ಪುತ್ರಿ ವಾಮಿಕಾ ಎಂದು ಗುರುತಿಸಲಾಗಿದೆ.

ಭುಜ್ ನಲ್ಲಿ ನಿಯೋಜನೆಗೊಂಡಿದ್ದ ಯೋಧರಾದ ನೇಗಿ ಮತ್ತು ರಾವತ್ ರಣ್ ಆಫ್ ಕಚ್ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ದುರಂತದಲ್ಲಿ ಜೀವಹಾನಿಗೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.