Home Latest ಮಾಹೆಯ 34ನೇ ಘಟಿಕೋತ್ಸವ ಪ್ರಥಮ ದಿನ : 1,348 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ…!!

ಮಾಹೆಯ 34ನೇ ಘಟಿಕೋತ್ಸವ ಪ್ರಥಮ ದಿನ : 1,348 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ…!!

ಉಡುಪಿ: ತಂತ್ರಜ್ಞಾನ ಬದಲಾಗುತ್ತಿರುತ್ತದೆ. ಆದರೆ ಮಾನವೀಯ ಮೌಲ್ಯಗಳು ಮತ್ತು ಸಂಬಂಧಗಳು ಎಂದಿಗೂ ಶಾಶ್ವತ. ಸದಾ ಕುತೂಹಲ ಮತ್ತು ವಿನಯಶೀಲತೆಯಿಂದ ಕಲಿಯುವುದನ್ನು ಮುಂದುವರಿಸಬೇಕು. ನಮ್ಮ ವೈಯಕ್ತಿಕ ಸಾಧನೆಗಿಂತ ಇತರರ ಜೀವನದಲ್ಲಿ ನಾವು ಮೂಡಿಸುವ ಪ್ರಭಾವವೇ ನಿಜವಾದ ಯಶಸ್ಸು ಎಂದು ಕೋನೆ ಎಲಿವೇರ್ಟಸ್ ಸಂಸ್ಥೆಯ ಭಾರತ ಮತ್ತು ದಕ್ಷಿಣ ಏಷ್ಯಾ ವಿಭಾಗದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗೊಸೈನ್ ಹೇಳಿದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ (ಮಾಹೆ) 34ನೇ ಘಟಿಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಘಟಿಕೋತ್ಸವಕ್ಕೆ ಚಾಲನೆ ನೀಡಿದರು.ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್. ಪೈ ಅಧ್ಯಕ್ಷತೆ ವಹಿಸಿದ್ದರು.

ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ತಂತ್ರಜ್ಞಾನ, ವೈದ್ಯಕಿಯ ಸೇವೆ ಮತ್ತು ಸಾಮಾಜಿಕ ಅಗತ್ಯಗಳು ವೇಗವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಅದಕ್ಕೂ ಮೀರಿದ ಜವಾಬ್ದಾರಿ ಹೊರಬೇಕು. ಕ್ಷಿಪ್ರ ಬದಲಾವಣೆಗಳಿಗೆ ಒಗ್ಗಿಕೊಳ್ಳಲು ಹಾಗೂ ಸಹಾನುಭೂತಿಯಿಂದ ಸ್ಪಂದಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಕುಲಪತಿ ಡಾ. ಕರುಣಾಕರ ಕೋಟೆಗಾರ್ ಸ್ವಾಗತಿಸಿದರು. ಎಂಐಟಿ ನಿರ್ದೇಶಕಿ ಡಾ. ಚಂದ್ರಕಲಾ ಸಿ.ಬಿ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸ್ಟೂಡೆಂಟ್ಸ್ ಅಫೇರ್ಸ್ ನಿರ್ದೇಶಕಿ ಡಾ. ಪೂರ್ಣಿಮಾ ಕುಂದಾಪುರ್ ಚಿನ್ನದ ಪದಕ ವಿಜೇತರ ಹಾಗೂ ಸೆಂಟರ್ ಫಾರ್ ಡಾಕ್ಟೋರಲ್ ಸ್ಟಡಿಸ್ ಉಪನಿರ್ದೇಶಕಿ ಡಾ. ವಸುಧಾ ದೇವಿ ಪಿಎಚ್ಡಿ ಪದವೀಧರರ ಹೆಸರು ವಾಚಿಸಿದರು. ಕುಲಸಚಿವ ಡಾ. ಪಿ. ಗಿರಿಧರ ಕಿಣಿ ವಂದಿಸಿದರು.

ಅತ್ಯುತ್ತಮ ಶೈಕ್ಷಣಿಕ ಸಾಧನೆ ತೋರಿದ ಮಣಿಪಾಲ ಕೆಎಂಸಿಯ ಎಂಬಿಬಿಎಸ್ ಪದವೀಧರೆ ಪ್ರಿಯಾಂಶಿ ರಾಸ್ತೋಗಿ ಹಾಗೂ ಎಂಐಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಬಿಟೆಕ್ ಪದವೀಧರೆ ಕೋಮಲ್ ಮಾಥುರ್ ಅವರಿಗೆ ಡಾ. ಟಿಎಂಎ ಪೈ ಚಿನ್ನದ ಪದಕ- ಪ್ರದಾನ ಮಾಡಿ ಗೌರವಿಸಲಾಯಿತು. ಮೊದಲ ದಿನ 53 ಪಿಎಚ್ಡಿ ಪದವೀಧರರು ಸೇರಿದಂತೆ ಒಟ್ಟು 1,348 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.