ಮಂಗಳೂರು: ನಗರದ ಕುಂಟಿಕಾನ ಫ್ಲೈಓವರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಾ ನಿಂತಿದ್ದ ಯುವಕನೊಬ್ಬ ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ನವೆಂಬರ್ 18ರಂದು ಬೆಳಿಗ್ಗೆ 9:00 ಗಂಟೆಗೆ ಉರ್ವ ಪೊಲೀಸ್ ಠಾಣೆಯ ಎಎಸ್ಐ ಲಕ್ಷ್ಮಣ ಜಿ. ಅವರು ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬೆಳಿಗ್ಗೆ 9:15ರ ಸುಮಾರಿಗೆ ಕುಂಟಿಕಾನ ಫ್ಲೈಓವರ್ ಬಳಿ ಯುವಕನೊಬ್ಬ ಸಿಗರೇಟ್ ಸೇದುತ್ತಾ ನಿಂತಿರುವುದು ಕಂಡುಬಂದಿದೆ.
ಯುವಕನನ್ನು ವಿಚಾರಿಸಿದಾಗ ಆತ ಬೆಂಗಳೂರಿನ ಮೊಹಮ್ಮದ್ ಫಹಾದ್ ಎಂ. (30) ಎಂದು ತಿಳಿದುಬಂದಿದೆ. ಈತನ ಮಾತಿನಲ್ಲಿ ತೊದಲುವಿಕೆ ಹಾಗೂ ಅಮಲಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಬಳಿಕ ಆತನನ್ನು ವಶಕ್ಕೆ ಪಡೆದು ಮಂಗಳೂರಿನ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಿಷೇಧಿತ ಮಾದಕ ವಸ್ತುವಾದ ಟೆಟ್ರಾಹೈಡ್ರೋಕ್ಯಾನಬಿನಾಲ್ (THC – Marijuana) ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.



