Home Crime ದೀಪಾವಳಿ ಸಂದರ್ಭ ಮಣಿಪಾಲ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ಮುಖ್ಯಮಂತ್ರಿಗೆ ಈಮೇಲ್ ಮೂಲಕ...

ದೀಪಾವಳಿ ಸಂದರ್ಭ ಮಣಿಪಾಲ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ಮುಖ್ಯಮಂತ್ರಿಗೆ ಈಮೇಲ್ ಮೂಲಕ ದೂರು ನೀಡಿರುವ ವಿದ್ಯಾರ್ಥಿಗಳು…!!

ಮಣಿಪಾಲ: ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಪ್ರಕರಣದಲ್ಲಿ ಮಣಿಪಾಲ ಪೊಲೀಸರು ಅಮಾಯಕ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ, ಮಣಿಪಾಲದ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ಈಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳ ಆರೋಪವೇನು? :

ನವೆಂಬರ್ 8 ರಂದು ತಮ್ಮ ವಸತಿ ಸಮುಚ್ಚಯದ ಆವರಣದಲ್ಲಿ ಯಾರಿಗೂ ತೊಂದರೆಯಾಗದಂತೆ ದೀಪಾವಳಿ ಆಚರಿಸಿದ್ದರು. ಆದರೆ ನವೆಂಬರ್ 10 ರಂದು ಪೊಲೀಸ್ ಸಿಬ್ಬಂದಿ ಫ್ಲ್ಯಾಟ್‌ಗಳಿಗೆ ನುಗ್ಗಿ, ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಲ್ಲರ ಎದುರೇ ಹಲ್ಲೆ ನಡೆಸಿದ್ದಾರೆ.

ಪೊಲೀಸರು ಥಳಿಸುತ್ತಿರುವ ದೃಶ್ಯಗಳು ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಯಾವುದೇ ಸೂಕ್ತ ಕಾರಣ ನೀಡದೆ ಠಾಣೆಗೆ ಕರೆದೊಯ್ದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೂರಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ. PSI ಸುಳ್ಳು ವಿವರಗಳೊಂದಿಗೆ FIR ದಾಖಲಿಸಿದ್ದಾರೆ ಎಂದೂ ದೂರಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಬೇರೆಯವರು ಮಾಡಿದ ಕೃತ್ಯಕ್ಕೆ ತಮ್ಮನ್ನು ಹೊಣೆ ಮಾಡಿ ಸುಮಾರು 20 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ದೌರ್ಜನ್ಯ ಕುರಿತು ವಿದ್ಯಾರ್ಥಿಗಳಿಂದ ದೂರು ಬಂದಿದೆ, ತನಿಖೆ ನಡೆಸುತ್ತೇವೆ – ಎಸ್ಪಿ ಸ್ಪಷ್ಟನೆ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಉಡುಪಿ ಎಸ್ಪಿ, ವಿದ್ಯಾರ್ಥಿಗಳಿಂದ ದೌರ್ಜನ್ಯದ ಬಗ್ಗೆ ದೂರು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

“ಹಾಕಿರುವ ಕಲಂಗಳ ಪ್ರಕಾರ ನೇರವಾಗಿ ಕೇಸ್ ದಾಖಲಿಸಲು ಸಾಧ್ಯವಿರಲಿಲ್ಲ, ಹಾಗಾಗಿ ಕೋರ್ಟ್ ಅನುಮತಿ ಪಡೆದು FIR ದಾಖಲಿಸಲಾಗಿದೆ.

ಸ್ಥಳದ CCTV / ವಿಡಿಯೋ ದೃಶ್ಯಗಳು ಹಾಗೂ ಸ್ಥಳದಲ್ಲಿದ್ದವರ ಹೇಳಿಕೆಗಳ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ.
ದೌರ್ಜನ್ಯದ ಬಗ್ಗೆ ವಿದ್ಯಾರ್ಥಿಗಳು 3 ದಿನಗಳ ಹಿಂದೆಯೇ ನೀಡಿದ್ದ ಅರ್ಜಿಯನ್ನು ಉಡುಪಿ DySP ಅವರಿಗೆ ತನಿಖೆಗೆ ವಹಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ, ಇನ್ನೂ ಯಾರ ಮೇಲೂ ಚಾರ್ಜ್‌ಶೀಟ್ ಹಾಕಿಲ್ಲ.ವಿದ್ಯಾರ್ಥಿಗಳ ಆತಂಕದ ಮೇರೆಗೆ ತನಿಖೆಯನ್ನು ಮಣಿಪಾಲ PSI ಅವರಿಂದ ಮಣಿಪಾಲ PI ಅವರಿಗೆ ಅರ್ಜಿ ಬಂದ ಅದೇ ದಿನವೇ ವರ್ಗಾಯಿಸಲಾಗಿದೆ” ಎಂದು ಎಸ್ಪಿ ತಿಳಿಸಿದ್ದಾರೆ.