ಕಾಸರಗೋಡು : ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಪನಯಾಲ್ ಪೆರಿಯಾಟಡ್ಕದ ಮನೆಯೊಂದರಲ್ಲಿ ಕಳ್ಳರು ಕೈಚಳಕ ತೋರಿಸಿ 5 ಪವನ್ ಚಿನ್ನಾಭರಣ ಹಾಗೂ ಸುಮಾರು 3 ಸಾವಿರ ರೂ. ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.
ನೀರಾಟಿ ನಿವಾಸಿ ಧನ್ಯ ಅವರ ಮನೆಯಲ್ಲಿ ಕಳವು ನಡೆದಿದ್ದು, ಮನೆಯ ವಿದ್ಯುತ್ ಮೀಟರ್ ಪೆಟ್ಟಿಗೆಯೊಳಗೆ ಇಟ್ಟಿದ್ದ ಕೀಲಿಯನ್ನು ಬಳಸಿ ಬಾಗಿಲು ತೆರೆದ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಾರೆ. ಬಳಿಕ ಕಪಾಟಿನಲ್ಲಿದ್ದ ಐದು ಪವನ್ ಚಿನ್ನಾಭರಣ ಹಾಗೂ 3 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಧನ್ಯ ಅವರು ಎಂದಿನಂತೆ ಗುರುವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದು, ಬೆಳಗ್ಗೆ 5.10ರ ಸುಮಾರಿಗೆ ಮನೆಗೆ ಬೀಗ ಹಾಕಿ ಹೊರಟಿದ್ದರು. ಸುಮಾರು 6 ಗಂಟೆಗೆ ಮರಳಿ ಬಂದ ಅವರು, ಮೀಟರ್ ಪೆಟ್ಟಿಗೆಯಿಂದ ಕೀಲಿ ತೆಗೆದು ಬಾಗಿಲು ತೆರೆದಿದ್ದಾರೆ. ಬಳಿಕ ಕಪಾಟನ್ನು ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ತಮ್ಮ ಮಾವ ಮಣಿ ನೀರಾಟಿ ಅವರಿಗೆ ಮಾಹಿತಿ ನೀಡಿದ ಧನ್ಯ, ಅವರು ಸ್ಥಳಕ್ಕೆ ಆಗಮಿಸಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಬೇಕಲ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಕಳವು ನಡೆದ ಸಂದರ್ಭದಲ್ಲಿ ಧನ್ಯ ಅವರ ಪುತ್ರಿ ಮನೆಯ ಮೇಲಿನ ಮಹಡಿಯ ಕೊಠಡಿಯಲ್ಲಿ ಮಲಗಿದ್ದು, ಘಟನೆ ಆಕೆಯ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಹೆಚ್ಚಿನ ತನಿಖೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



