Home Crime ಪುಂಜಾಲಕಟ್ಟೆ: ಚಿನ್ನದ ಉಂಗುರ ಖರೀದಿ ನೆಪದಲ್ಲಿ ಬಂದ ಖದೀಮರು : ಲಕ್ಷಾಂತರ ರೂ. ಮೌಲ್ಯದ ಚಿನ್ನದ...

ಪುಂಜಾಲಕಟ್ಟೆ: ಚಿನ್ನದ ಉಂಗುರ ಖರೀದಿ ನೆಪದಲ್ಲಿ ಬಂದ ಖದೀಮರು : ಲಕ್ಷಾಂತರ ರೂ. ಮೌಲ್ಯದ ಚಿನ್ನದ ಬ್ರಾಸ್ಲೆಟ್ ಕಳವು…!!

ಪುಂಜಾಲಕಟ್ಟೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ‌ ಸಮೀಪ ಚಿನ್ನದ ಉಂಗುರ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ರೂ. 4,40,000 ಮೌಲ್ಯದ ಚಿನ್ನದ ಬ್ರಾಸ್ಲೆಟ್‌ಗಳನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಮಡಂತ್ಯಾರಿನಲ್ಲಿ ನಡೆದಿದೆ.

ಮಡಂತ್ಯಾರು, ಆರ್.ಕೆ. ಕಾಂಪ್ಲೆಕ್ಸ್, ಮೈನ್ ರೋಡ್‌ನಲ್ಲಿರುವ ಸಾನಿಧ್ಯ ಜ್ಯುವೆಲ್ಲರಿಸ್ ಮಾಲೀಕ ರಾಜೇಶ್ (43), ತಂದೆ ರಮೇಶ್ ಆಚಾರ್ಯ, ವಾಸ ಕಾನ್ವೆಂಟ್ ರೋಡ್, ಮಡಂತ್ಯಾರು ಅವರು ನೀಡಿದ ದೂರಿನಂತೆ ಈ ಘಟನೆ ನಡೆದಿದೆ.

ಸಂಜೆ ಫಿರ್ಯಾದಿದಾರರು ತಮ್ಮ ಮಾಲಕತ್ವದ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರಿನಲ್ಲಿರುವ ಸಾನಿಧ್ಯ ಜ್ಯುವೆಲ್ಲರಿ ಶಾಪ್‌ನಲ್ಲಿದ್ದಾಗ, ಚಿನ್ನದ ಉಂಗುರ ಖರೀದಿಗೆಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದರು. ಸಂಜೆ ಸುಮಾರು 6.25 ಗಂಟೆಯಿಂದ 6.35 ಗಂಟೆಯ ಮಧ್ಯಾವಧಿಯಲ್ಲಿ ಅಂಗಡಿಯಲ್ಲಿದ್ದ ಅಂದಾಜು 35 ಗ್ರಾಂ ತೂಕವಿರುವ 5-6 ಚಿನ್ನದ ಬ್ರಾಸ್ಲೆಟ್‌ಗಳಿದ್ದ ಪ್ಲಾಸ್ಟಿಕ್ ಪ್ಯಾಕೆಟ್ ಅನ್ನು ಅವರು ಕಳವು ಮಾಡಿಕೊಂಡು ಹೋಗಿದ್ದಾರೆ.

ನಂತರ ಫಿರ್ಯಾದಿದಾರರು ಅಂಗಡಿಗೆ ಬಂದು ಚಿನ್ನಾಭರಣಗಳನ್ನು ಜೋಡಿಸುವ ಸಂದರ್ಭ ಚಿನ್ನದ ಬ್ರಾಸ್ಲೆಟ್‌ಗಳು ಕಳವಾದ ಬಗ್ಗೆ ತಿಳಿದುಬಂದಿದೆ. ಅಂಗಡಿಯ ಒಳಭಾಗದಲ್ಲಿರುವ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ದೃಢಪಟ್ಟಿದೆ.

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿ ಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.