ಉಡುಪಿ, ಅ.22: ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ, ಮಂಗಳೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭವು ನಾಡಿದ್ದು (ಅ.25, ಭಾನುವಾರ) ಸಂಜೆ 4.30ಕ್ಕೆ ಉಡುಪಿಯ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಜರುಗಲಿದೆ.
2026ನೇ ಸಾಲಿನ ಪ್ರಶಸ್ತಿಯನ್ನು ಮೂವರು ಹಿರಿಯ ಸಾಧಕರು ಪಡೆಯಲಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳ ನಡುವೆ ಮಹಾಸೇತುವಾಗಿ ಕಾರ್ಯನಿರ್ವಹಿಸಿ, ಹಳಗನ್ನಡ ಕಾವ್ಯ, ಜನಪದ ಪುರಾಣ ಹಾಗೂ ಕನ್ನಡದ ಶ್ರೇಷ್ಠ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ ಡಾ. ಎನ್.ಟಿ. ಭಟ್, ನಾಲ್ಕು ದಶಕಗಳ ಕಾಲ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ವಿದ್ವಾಂಸ ಡಾ. ಎನ್. ಲಕ್ಷ್ಮೀನಾರಾಯಣ ಭಟ್ಟ, ಹಾಗೂ ಪ್ರಮುಖ ವಿಮರ್ಶಕ, ಸಂಶೋಧಕ, ಚಿಂತಕ ಡಾ. ಅಜಕ್ಕಳ ಗಿರೀಶ ಭಟ್ಟ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ಗೌರವದನ 10,000 ದೊಂದಿಗೆ ಪ್ರಶಸ್ತಿ ಪತ್ರ ಮತ್ತು ಫಲಕ ಒಳಗೊಂಡಿರುತ್ತದೆ.
ಕಾರ್ಯಕ್ರಮದಲ್ಲಿ ಪ್ರೊ. ಎ.ವಿ. ನಾವಡ ಪ್ರಾಸ್ತಾವಿಕ ಮಾತನಾಡಲಿದ್ದು, ಮುರಲಿ ಕಡೆಕಾರು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಎನ್.ಐ.ಟಿ.ಕೆ. ಸುರತ್ಕಲ್‌ನ ಮಾಜಿ ನಿರ್ದೇಶಕ ಡಾ. ಎಚ್. ಸುಧಾಕರ ನಾಯಕ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಎಂ.ಜಿ.ಎಂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉಡುಪಿ ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಉಡುಪಿ ಮತ್ತು ಸುಹಾಸಂ, ಉಡುಪಿ ಸಂಸ್ಥೆಗಳು ಸಹಕರಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.






