ಮಡಿಕೇರಿ : ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಧಿಸಿದ್ದ ‘ಸಮುದಾಯ ಸೇವೆ’ ಶಿಕ್ಷೆಯ ಭಾಗವಾಗಿ, ಅಪರಾಧಿಯೊಬ್ಬರು ಸಂಚಾರಿ ಪೊಲೀಸರೊಂದಿಗೆ ಸೇರಿ ಸಾರ್ವಜನಿಕರ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ ಅಪರೂಪದ ಘಟನೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸಿದ್ದಾಪುರ ಪಟ್ಟಣ ಸಾಕ್ಷಿಯಾಗಿದೆ.
ಗಾಂಜಾ ಸೇವನೆ ಮಾಡಿದ್ದ ಆರೋಪದ ಮೇಲೆ ಸಿದ್ದಾಪುರ ನಿವಾಸಿ ಆಸೀಮ್ ಎಂಬಾತನಿಗೆ ₹5,000 ದಂಡ ವಿಧಿಸಿದ್ದ ನ್ಯಾಯಾಲಯ, ಅದರ ಜೊತೆಗೆ ಸಮುದಾಯ ಸೇವೆಯ ಶಿಕ್ಷೆಯನ್ನೂ ನೀಡಿ ಆದೇಶಿಸಿತ್ತು.
ನ್ಯಾಯಾಲಯದ ಆದೇಶದಂತೆ ನವೆಂಬರ್ 15ರಂದು ಸಿದ್ದಾಪುರ ಪಟ್ಟಣದಲ್ಲಿ ಪೊಲೀಸರ ಮೇಲ್ವಿಚಾರಣೆಯಲ್ಲಿ ಆಸೀಮ್ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಹಾಜರಾಗಿದ್ದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವುದರ ಜೊತೆಗೆ, ಪಾದಚಾರಿಗಳ ಸಂಚಾರವನ್ನೂ ದಿನವಿಡೀ ನಿರ್ವಹಿಸುವ ಮೂಲಕ ತಮ್ಮ ಶಿಕ್ಷೆಯನ್ನು ಪೂರೈಸಿದರು.
ಕೇವಲ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವುದಕ್ಕಿಂತ, ಸಾರ್ವಜನಿಕ ಸೇವೆಯಲ್ಲಿ ತೊಡಗಿಸುವುದರಿಂದ ಅಪರಾಧಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ತಪ್ಪಿನ ಅರಿವು ಮೂಡುತ್ತದೆ ಎಂಬ ಮಹತ್ವದ ಅಭಿಪ್ರಾಯದೊಂದಿಗೆ ನ್ಯಾಯಾಲಯ ಈ ಮಾದರಿ ಶಿಕ್ಷೆಯನ್ನು ವಿಧಿಸಿದೆ.
ಈ ಹಿಂದೆ, ಇದೇ ವರ್ಷದ ಮಾರ್ಚ್ನಲ್ಲಿ ಕಡೂರು ಉಪವಿಭಾಗದಲ್ಲಿ ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ದ ವ್ಯಕ್ತಿಯೊಬ್ಬರಿಗೆ ರಸ್ತೆ ಬದಿಯಲ್ಲಿ ನಿಂತು ಸಂಚಾರ ನಿಯಮಗಳ ಜಾಗೃತಿ ಫಲಕ ಹಿಡಿಯುವಂತೆ ನ್ಯಾಯಾಲಯ ಆದೇಶಿಸಿತ್ತು. ಸದ್ಯ ಸಿದ್ದಾಪುರದಲ್ಲಿ ನಡೆದ ಈ ವಿಭಿನ್ನ ಶಿಕ್ಷೆಯ ಜಾರಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.



