ಮಂಗಳೂರು : ನಗರದ ಸಮೀಪ ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಪೊಲೀಸರು ತಡೆದು, ಲಾರಿ ಸಮೇತ 16 ಹೋರಿಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚಾಲಕ ಮೊಹಮ್ಮದ್ ರಫಿ (50) ಹಾಗೂ ಕ್ಲೀನರ್ ರೆಹಮಾನ್ (40) ಎಂದು ಗುರುತಿಸಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಸುಮಾರು 1 ½ ವರ್ಷದಿಂದ ಸಹಾಯಕ ಪೊಲೀಸ್ ಉಪ-ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಂಗಾಧರ್ ಎನ್. ಅವರು ನ.16 ರಂದು ಬೆಳಿಗ್ಗೆ ಮಾರ್ನಿಂಗ್ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಬಿಳಿ ಬಣ್ಣದ ಭಾರತ್ ಬೆಂಝ್ ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಂತೂರು ಕಡೆಯಿಂದ ಕೇರಳ ರಾಜ್ಯದ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿತ್ತು.
ಅದರಂತೆ ಅವರು ಹೊಯ್ಸಳ ಸಿಬ್ಬಂದಿಗಳಾದ ಹೆಚ್.ಸಿ. ರಮೇಶ ಹಾಗೂ ಎ.ಹೆಚ್.ಸಿ. ಮಹಾಂತೇಶ್ ಅವರೊಂದಿಗೆ ಪಂಪ್ವೆಲ್ ಉಜ್ಜೋಡಿಯ ರಾಯಲ್ ಕಾರ್ಸ್ ಎದುರು ಇರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನಕ್ಕೆ ಕಾಯುತ್ತ ನಿಂತಿದ್ದರು. ಬೆಳಿಗ್ಗೆ ಸುಮಾರು 7:40 ಗಂಟೆಗೆ ಬಿಳಿ ಬಣ್ಣದ ಲಾರಿ ಬರುತ್ತಿದ್ದು, ಅದನ್ನು ಬದಿಗೆ ನಿಲ್ಲಿಸುವಂತೆ ತಿಳಿಸಿದಾಗ ಚಾಲಕ ಲಾರಿಯನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದಾನೆ.
ಪರಿಶೀಲಿಸಿದಾಗ ಸದ್ರಿ ಲಾರಿಯು ಬಿಳಿ ಬಣ್ಣದ KA-51-AC-9498 ನೋಂದಣಿ ಸಂಖ್ಯೆಯ ಭಾರತ್ ಬೆಂಝ್ ಕಂಪೆನಿಯ ಲಾರಿ ಆಗಿತ್ತು. ಲಾರಿಯ ಬಾಡಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲು ವೈದ್ಯರ ಪ್ರಮಾಣ ಪತ್ರ, ಅಧಿಕೃತ ಇಲಾಖೆಯ ಹಾಗೂ ಸರ್ಕಾರದ ಪರವಾನಿಗೆ ಇಲ್ಲದೇ, ವಿವಿಧ ಗಾತ್ರದ, ವಿವಿಧ ಬಣ್ಣದ 16 ಹೋರಿಗಳನ್ನು ಲಾರಿಯ ಹಿಂದಿನ ಬಾಡಿ ಭಾಗದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೊಂದು ಹಗ್ಗಗಳಿಂದ ಲಾರಿಯ ಬಾಡಿಯ ಕಬ್ಬಿಣದ ಕ್ಯಾರೇಜ್ಗಳಿಗೆ ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.
ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿ, ವಿವೋ ಮೊಬೈಲ್ ಫೋನ್-1 ಮೌಲ್ಯ ರೂ. 2,000/-, KA-51-AC-9498 ನೋಂದಣಿ ಸಂಖ್ಯೆಯ ಭಾರತ್ ಬೆಂಝ್ ಲಾರಿ-1 ಅಂದಾಜು ಮೌಲ್ಯ ರೂ. 7,00,000/-, ಹಸಿರು ಟಾರ್ಪಲ್-1 ಮೌಲ್ಯ ರೂ. 200/-, ಕಪ್ಪು ಬಣ್ಣದ 4 ಹೋರಿಗಳು ಮೌಲ್ಯ ರೂ. 40,000/- ಹಾಗೂ ಬಿಳಿ ಬಣ್ಣದ 12 ಹೋರಿಗಳು ಮೌಲ್ಯ ರೂ. 1,20,000/- ಸೇರಿದಂತೆ ಒಟ್ಟು ಸೊತ್ತುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.



