Home Crime 70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಯತ್ನಿಸಿದ ಯುವಕ ಅರೆಸ್ಟ್…!!

70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಯತ್ನಿಸಿದ ಯುವಕ ಅರೆಸ್ಟ್…!!

ಕೊಚ್ಚಿ: ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 70 ವರ್ಷದ ಹರಿತ ಕರ್ಮ ಸೇನಾ ಕಾರ್ಯಕರ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ 29 ವರ್ಷದ ಯುವಕನನ್ನು ಕಡವಂತ್ರ ಪೊಲೀಸರು ಬಂಧಿಸಿದ್ದಾರೆ.

ಫೋರ್ಟ್ ಕೊಚ್ಚಿಯ ಚುಲ್ಲಿಕ್ಕಲ್ ನಿವಾಸಿ ಹಾಗೂ ಎಂ.ಜಿ ರಸ್ತೆಯ ಮಲ್ಟಿಪ್ಲೆಕ್ಸ್‌ನಲ್ಲಿರುವ ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಯಾಸಿರ್ ಅಫ್ರೀದ್‌ ಬಂಧಿತ ಆರೋಪಿ. ಎರಡು ದಿನಗಳ ತನಿಖೆಯ ಬಳಿಕ ಆತನ ಕೆಲಸದ ಸ್ಥಳದ ಸಮೀಪವೇ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ.

ನವೆಂಬರ್ 13 ರಂದು ಬೆಳಗಿನ ಜಾವ 2.50 ರಿಂದ 3 ಗಂಟೆಯ ಸುಮಾರಿಗೆ ನಾರ್ತ್ ಗಿರಿನಗರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಸ ಸಂಗ್ರಹಿಸುವ ಕೆಲಸ ಮುಗಿಸಿ ವೃದ್ಧೆ ಎಂದಿನಂತೆ ಒಬ್ಬರೇ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗೆಳೆಯನನ್ನು ಡ್ರಾಪ್ ಮಾಡಿ ಬೈಕ್‌ನಲ್ಲಿ ಮರಳುತ್ತಿದ್ದ ಆರೋಪಿ, ಒಂಟಿಯಾಗಿ ಹೋಗುತ್ತಿದ್ದ ವೃದ್ಧೆಯನ್ನು ಕಂಡು ಹಿಂಬಾಲಿಸಿದ್ದಾನೆ.

ಮದ್ಯದ ಅಮಲಿನಲ್ಲಿದ್ದ ಆರೋಪಿ ಬೈಕ್ ನಿಲ್ಲಿಸಿ, ಹಿಂದಿನಿಂದ ಬಂದು ವೃದ್ಧೆಯನ್ನು ಹಿಡಿದು ರಸ್ತೆಗೆ ತಳ್ಳಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಕಡವಂತ್ರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ವೇಳೆ ವೃದ್ಧೆ ಕಿರುಚಿಕೊಂಡಾಗ ಸುತ್ತಮುತ್ತಲಿನ ಬೀದಿ ನಾಯಿಗಳು ಬೊಗಳಲಾರಂಭಿಸಿವೆ. ಇದರಿಂದ ಗಾಬರಿಗೊಂಡ ಆರೋಪಿ ಕೃತ್ಯವನ್ನು ಅರ್ಧಕ್ಕೆ ಕೈಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ ಕೆಳಗೆ ಬಿದ್ದ ರಭಸಕ್ಕೆ ತಲೆ ನೆಲಕ್ಕೆ ಬಡಿದಿದೆ, ಮುಖದ ಮೇಲೆ ಉಗುರಿನ ಪರಚಿದ ಗಾಯಗಳಾಗಿವೆ. ಆ ಸಮಯದಲ್ಲಿ ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ವೃದ್ಧೆ ಹೇಗೋ ಚೇತರಿಸಿಕೊಂಡು ಉದಯ ನಗರ ಕಾಲೋನಿಯಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ.

ಆಘಾತ ಹಾಗೂ ಸುಸ್ತಿನಿಂದ ಮನೆಯಲ್ಲೇ ವಿಶ್ರಾಂತಿ ಪಡೆದ ವೃದ್ಧೆ, ಸಂಜೆಯ ವೇಳೆಗೆ ಇತರರಿಗೆ ವಿಷಯ ತಿಳಿಸಿ ಸಂಬಂಧಿಕರೊಂದಿಗೆ ಕಡವಂತ್ರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆರೋಪಿ ತಲೆಮರೆಸಿಕೊಳ್ಳುವುದನ್ನು ತಪ್ಪಿಸಲು ಪೊಲೀಸರು ಎಫ್‌ಐಆರ್ ದಾಖಲಾದ ವಿಷಯವನ್ನು ಗೌಪ್ಯವಾಗಿಟ್ಟಿದ್ದರು.

ದೂರುದಾರರಿಗೆ ಅಥವಾ ಸಿಸಿಟಿವಿ ದೃಶ್ಯಗಳಲ್ಲಿ ಬೈಕ್ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸದ ಕಾರಣ ತನಿಖೆ ಆರಂಭದಲ್ಲಿ ಸವಾಲಾಗಿತ್ತು. ಬಳಿಕ ಪೊಲೀಸರು ಆ ಪ್ರದೇಶದ ಹಲವು ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಟವರ್ ಡೇಟಾ ಪರಿಶೀಲಿಸಿ, ವೃದ್ಧೆ ನೀಡಿದ ಮಾಹಿತಿಯಂತೆ ಆರೋಪಿಯ ರೇಖಾಚಿತ್ರ ಸಿದ್ಧಪಡಿಸಿ ಪತ್ತೆ ಹಚ್ಚಿದ್ದಾರೆ. ಎಂ.ಜಿ ರಸ್ತೆಯ ಕಾಫಿ ಶಾಪ್ ಬಳಿ ಆತನ ಬೈಕ್ ಪತ್ತೆಯಾದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.