ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಹಿಳೆಯರು ಸಹಿತ 9 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಕನು ಅ.5ರಂದು ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಆತನ ಪರಿಚಯದ ಸುಧಾಕರ, ಪೇರಿಗೇರಿ ಚಂದ್ರ ಹಾಗೂ ಹರೀಶ್ ಎಂಬವರು ರಸ್ತೆ ಬದಿಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಹೇಳಲಾಗಿದೆ.
ಬಳಿಕ ಸುಧಾಕರ, ಹರೀಶ್, ಪೇರಿಗೇರಿ ಚಂದ್ರ, ವಸಂತಿ, ಮೋಹನ್, ಗೋವಚಂದ್ರ, ಟಿ.ಸಿ. ಚಂದ್ರ, ಪ್ರಮೀಳ ಹಾಗೂ ಸುಮ ಎಂಬವರು ಬಾಲಕನ ಮನೆಯ ಅಂಗಳಕ್ಕೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಜಗಳ ಬಿಡಿಸಲು ಬಂದ ಬಾಲಕನ ತಾಯಿ ಹಾಗೂ ತಂಗಿಯನ್ನೂ ದೂಡಿ ಹಾಕಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಬಾಲಕ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸಂಬಂಧ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ.11ರಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




