Home Crime ಬಂಟ್ವಾಳ: ರಸ್ತೆ ಬದಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ : 9ನೇ ತರಗತಿ ವಿದ್ಯಾರ್ಥಿ ಸಾವು…!!

ಬಂಟ್ವಾಳ: ರಸ್ತೆ ಬದಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ : 9ನೇ ತರಗತಿ ವಿದ್ಯಾರ್ಥಿ ಸಾವು…!!

ಬಂಟ್ವಾಳ: ರಸ್ತೆ ಬದಿಯಲ್ಲಿ ಯಾವುದೇ ಸೂಚನೆ ಇಲ್ಲದೆ ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 9ನೇ ತರಗತಿ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕೊಪ್ಪಳದಲ್ಲಿ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ಸುಚಿನ್ (14) ಎಂದು ತಿಳಿದು ಬಂದಿದೆ.

ರಾತ್ರಿ 9 ಗಂಟೆ ಸುಮಾರಿಗೆ ಬಿ.ಸಿ. ರೋಡ್ – ಪೊಳಲಿ ರಾಜ್ಯ ಹೆದ್ದಾರಿಯಲ್ಲಿ, ತೆಂಕಬೆಳ್ಳೂರು ಗ್ರಾಮದ ಕೊಪ್ಪಳ ಎಂಬಲ್ಲಿ KA-52-AA-9705 ನೇ ಗೂಡ್ಸ್ ಲಾರಿಯನ್ನು ಅದರ ಚಾಲಕ ವಿಠ್ಠಲ್ ಕುಮಾರ್ ಅವರು ಯಾವುದೇ ಸೂಚನೆ ಮತ್ತು ಪಾರ್ಕಿಂಗ್ ಲೈಟ್‌ಗಳನ್ನು ಹಾಕದೇ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವಂತೆ ರಸ್ತೆ ಮೇಲೆ ನಿಲ್ಲಿಸಿದ್ದರು.

ಅದೇ ವೇಳೆ KA-70-K-2889 ನೇ ಸ್ಕೂಟರನ್ನು ಸುಚಿನ್ ಬಿ.ಸಿ. ರೋಡ್ ಕಡೆಯಿಂದ ಪೊಳಲಿ ಕಡೆಗೆ ಸವಾರಿ ಮಾಡುತ್ತಿದ್ದಾಗ ಲಾರಿಯ ಹಿಂಬದಿಯ ಭಾಗಕ್ಕೆ ಸ್ಕೂಟರಿನ ಎದುರಿನ ಭಾಗದಿಂದ ಡಿಕ್ಕಿ ಹೊಡೆದಿದೆ. ಸ್ಕೂಟರ್ ಸಮೇತ ಸುಚಿನ್ ಲಾರಿಯಡಿಗೆ ರಸ್ತೆಗೆ ಬಿದ್ದು ಎಡ ಕಾಲಿಗೆ ಮೂಳೆ ಮುರಿತ ಹಾಗೂ ತಲೆಗೆ ತೀವ್ರ ತರದ ರಕ್ತ ಗಾಯಗಳಾಗಿವೆ.

ಗಾಯಗೊಂಡ ಸುಚಿನ್ ಅವರನ್ನು ತಕ್ಷಣ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ನಂತರ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನ.15 ರಂದು ಬೆಳಿಗ್ಗೆ 9:53 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.