Home Crime ಕುಂದಾಪುರ: ಇ-ಚಲನ್ ಆಪ್ ಹುಡುಕಲು ಹೋಗಿ ಲಕ್ಷಾಂತರ ರೂ. ಸೈಬರ್ ವಂಚನೆ…!!

ಕುಂದಾಪುರ: ಇ-ಚಲನ್ ಆಪ್ ಹುಡುಕಲು ಹೋಗಿ ಲಕ್ಷಾಂತರ ರೂ. ಸೈಬರ್ ವಂಚನೆ…!!

ಕುಂದಾಪುರ: ಕೇರಳದಲ್ಲಿ ಮಾಡಿದ್ದ ಟ್ರಾಫಿಕ್ ವಯಲೇಶನ್‌ನ ಚಲನ್ ಕಟ್ಟಲು ಮೊಬೈಲ್‌ನಲ್ಲಿ ಇ-ಚಲನ್ ಆಪ್ ಸರ್ಚ್ ಮಾಡಿದ ವ್ಯಕ್ತಿಯ ಖಾತೆಯಿಂದ ಸೈಬರ್ ಅಪರಾಧಿಗಳು ಒಟ್ಟು 3,41,042.18 ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ವಂಚನೆಯಾದವರು ಜಾಕ್ಸನ್ ಡಿಸೋಜಾ (36) ಕುಂದಾಪುರ ಎಂದು ತಿಳಿಯಲಾಗಿದೆ.

ಜಾಕ್ಸನ್ ಅವರು ಹಿಂದೆ ಕೇರಳದಲ್ಲಿ ಟ್ರಾಫಿಕ್ ವೈಲೇಶನ್ ಮಾಡಿದ್ದರಿಂದ ಅದರ ಚಲನ್ ಕಟ್ಟಬೇಕು ಎನ್ನುವ ಉದ್ದೇಶದಿಂದ ನ.11 ರಂದು ರಾತ್ರಿ 9 ಗಂಟೆಯ ಸಮಯಕ್ಕೆ ಮೊಬೈಲ್‌ನಲ್ಲಿ ಕೇರಳ ಇ-ಚಲನ್ ಆಪ್ ಸರ್ಚ್ ಮಾಡಿದ್ದರು.

ನ.12 ರಂದು ಮಧ್ಯಾಹ್ನ 3:30 ಗಂಟೆಗೆ ಪಿರ್ಯಾದಿದಾರರ ಮೊಬೈಲ್‌ನಲ್ಲಿ ಸಿಸ್ಟಂ ಅಪ್‌ಡೇಟ್ ಎಂದು ತೋರಿಸಿದೆ. ನಂತರ ಸಂಜೆ 5 ಗಂಟೆಯ ಸಮಯಕ್ಕೆ ಮೀನು ವಾಹನದ ಡ್ರೈವರ್‌ಗೆ 5,000 ರೂ. ಹಣವನ್ನು ಫೋನ್ ಪೇ ಮಾಡುವ ಉದ್ದೇಶದಿಂದ ಹಣ ಹಾಕಲು ಹೋದಾಗ ಬ್ಯಾಲೆನ್ಸ್ ಇರುವುದಿಲ್ಲ ಎಂದು ತೋರಿಸಿದೆ.

ನಂತರ ಪಿರ್ಯಾದಿದಾರರು ಬ್ಯಾಂಕ್‌ಗೆ ಹೋಗಿ ಕರೆಂಟ್ ಅಕೌಂಟ್ ಮತ್ತು ಎಸ್‌ಬಿ ಅಕೌಂಟ್ ಖಾತೆಯನ್ನು ಚೆಕ್ ಮಾಡಿದಾಗ, ಕರೆಂಟ್ ಅಕೌಂಟ್‌ನಿಂದ 98,400.18 ರೂ., 23,695 ರೂ., 25,194 ರೂ., 28,987 ರೂ., 51,430 ರೂ., 59,552 ರೂ., 5,000 ರೂ., 5,000 ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು.

ಅದಲ್ಲದೆ, ಎಸ್‌ಬಿ ಅಕೌಂಟಿಗೆ 500 ರೂ. ಹಣ ಹಾಕಿ, ಎಸ್‌ಬಿ ಅಕೌಂಟ್‌ನಿಂದ 24,284 ರೂ. ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ಮತ್ತು 20,000 ರೂ. ಹಣವನ್ನು ಕರೆಂಟ್ ಅಕೌಂಟ್‌ನಿಂದ ಎಸ್‌ಬಿ ಅಕೌಂಟಿಗೆ ಹಾಕಿ 5,000 ರೂ., 5,000 ರೂ., 10,000 ರೂ. ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ನಂತರ ಎಸ್‌ಬಿ ಅಕೌಂಟಿಗೆ 15,000 ರೂ. ಹಾಕಿ ಮತ್ತೆ 15,000 ರೂ. ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.

ಪಿರ್ಯಾದಿದಾರರ ಖಾತೆಯಿಂದ ಒಟ್ಟು 3,41,042.18 ರೂ. ಹಣವನ್ನು ಯಾರೋ ಸೈಬರ್ ಅಪರಾಧಿಗಳು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ‌‌. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.