Home Crime ಪಡುಬಿದ್ರಿ: ಕಾರು-ದ್ವಿಚಕ್ರ ವಾಹನ ಡಿಕ್ಕಿ : ಗಂಭೀರ ಗಾಯಗೊಂಡಿದ್ದ ಸವಾರ ಸಾವು…!!

ಪಡುಬಿದ್ರಿ: ಕಾರು-ದ್ವಿಚಕ್ರ ವಾಹನ ಡಿಕ್ಕಿ : ಗಂಭೀರ ಗಾಯಗೊಂಡಿದ್ದ ಸವಾರ ಸಾವು…!!

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳು ಗ್ರಾಮದ ಎರ್ಮಾಳು ಕಲ್ಯಾಣಿ ಪೆಟ್ರೋಲ್ ಬಂಕ್ ಬಳಿ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು ಕಾಪು ತಾಲೂಕಿನ ನಡ್ಸಾಲು ಗ್ರಾಮದ ಪಿ.ಎ. ಮಾಧವ ರಾವ್ (68) ಎಂದು ಗುರುತಿಸಲಾಗಿದೆ.

ನವೆಂಬರ್ 15ರಂದು ಮಧ್ಯಾಹ್ನ ಸುಮಾರು 12:30ರ ವೇಳೆಗೆ ಮಾಧವ ರಾವ್ ಅವರು KA-20-HB-1464 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಪಡುಬಿದ್ರಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಎರ್ಮಾಳು ಕಲ್ಯಾಣಿ ಪೆಟ್ರೋಲ್ ಬಂಕ್ ಸಮೀಪ ತಲುಪಿದಾಗ ಏಕಾಏಕಿ ಬಲಕ್ಕೆ ತಿರುಗಿಸಿದ ಪರಿಣಾಮ, ಹಿಂದಿನಿಂದ ಬರುತ್ತಿದ್ದ KA-21-P-8498 ನೋಂದಣಿ ಸಂಖ್ಯೆಯ ಕಾರಿನ ಎಡಭಾಗಕ್ಕೆ ದ್ವಿಚಕ್ರ ವಾಹನದ ಹ್ಯಾಂಡಲ್ ಡಿಕ್ಕಿಯಾಗಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಮಾಧವ ರಾವ್ ಅವರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3:30ರ ಸುಮಾರಿಗೆ ಮೃತಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ  ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.