ಮೂಡುಬೆಳ್ಳೆ: ವಿದೇಶದಿಂದ ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಖಾತೆಗೆ ೧೫ ಲಕ್ಷ ರೂ. ಜಮೆ ಮಾಡ್ತೇನೆ, ೨ ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇನೆ, ದೇಶವನ್ನು ೬೦ ತಿಂಗಳಲ್ಲಿ ಬದಲಾಯಿಸ್ತೇನೆ, ಪೆಟ್ರೋಲ್ ದರವನ್ನು ಲೀಟರ್ಗೆ ೩೦ ರೂ.ಗೆ ಇಳಿಸುತ್ತೇನೆ; ನನ್ನನ್ನು ನಂಬಿ ಎಂದು ಭಾಷಣ ಮಾಡಿಯೇ ಮೋದಿ ಅವರು ಮೂರು ಚುನಾವಣೆಗಳನ್ನು ಗೆದ್ದರೂ ಯಾವುದೇ ಭರವಸೆಯನ್ನು ಈಡೇರಿಸಲಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಪಂಚ ಗ್ಯಾರೆಂಟಿಯನ್ನು ಘೋಷಿಸಿ ಮಾತಿಗೆ ಬದ್ಧವಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೊಳ್ಳಿ ಹೇಳಿದರು. ಅವರು ಮೂಡುಬೆಳ್ಳೆ ಗೀತಾಮಂದಿರದಲ್ಲಿ ಅ. ೨೪ರಂದು ಬೆಳ್ಳೆ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಜರಗಿದ ಪಂಚ ಗ್ಯಾರೆಂಟಿ ಸಮಾವೇಶದಲ್ಲಿ ದಿಕ್ಸೂಚಿ ನುಡಿಗಳನ್ನಾಡಿದರು.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ ಇಲ್ಲಿ ನೆರೆದಿರುವ ಫಲಾನುಭವಿಗಳ ಸಂಖ್ಯೆಯೇ ರಾಜ್ಯದ ಕಾಂಗ್ರೆಸ್ ಸರಕಾರದ ಸಾಧನೆಗೆ ಸಾಕ್ಷಿಯಾಗಿದೆ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ನಮ್ಮ ಸರಕಾರ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.
ಬೆಳ್ಳೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿನ್ಸೆಂಟ್ ಫೆರ್ನಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸಮ್ಮಾನಿಸಲಾಯಿತು.
ಕಾಪು ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ನವೀನ್ಚಂದ್ರ ಸುವರ್ಣ, ಜಿಪಂ ಮಾಜಿ ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಐಡಾ ಗಿಬ್ಬ ಡಿಸೋಜಾ, ಬೆಳ್ಳೆ ಸೊಸೈಟಿ ನಿರ್ದೇಶಕರಾದ ಪಟೇಲ್ಮನೆ ದಯಾನಂದ ಶೆಟ್ಟಿ, ಸಿಎ ಪ್ರಿತೇಶ್ ಡೇಸಾ, ಭೂ ನ್ಯಾಯ ಮಂಡಳಿ ಸದಸ್ಯ ರಾಘವ ಕೋಟ್ಯಾನ್, ಕೆಡಿಪಿ ಸದಸ್ಯ ಎಂ. ರಮೇಶ್, ಕಾಂಗ್ರೆಸ್ ತಾಲ್ಲೂಕು ಸಮಿತಿ ಪದಾಧಿಕಾರಿಗಳಾದ ರೀನಾ ವಿನುತಾ ಡಿಸೋಜಾ ಹೆಜಮಾಡಿ, ಪ್ರಭಾಕರ ಆಚಾರ್ಯ ಕಟಪಾಡಿ, ಸುಧೀರ್ ಕರ್ಕೇರಾ ಹೆಜಮಾಡಿ, ಹಸನ್ ಬಾವಾ ಪಡುಬಿದ್ರಿ ವೇದಿಕೆಯಲ್ಲಿದ್ದರು.
ಗ್ರಾಬೆಳ್ಳೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್ ಸುವರ್ಣ ಸ್ವಾಗತಿಸಿದರು. ಚಾರ್ಲ್ಸ್ ಕ್ವಾಡ್ರಸ್ ವಂದಿಸಿದರು. ತಾಪಂ ಮಾಜಿ ಸದಸ್ಯೆ ಸುಜಾತಾ ಸುವರ್ಣ ನಿರೂಪಿಸಿದರು. ಶಂಕರ್ದಾಸ್ ಮತ್ತು ತಂಡದವರಿಂದ ಸಂವಿಧಾನ ಕುರಿತ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.




