ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಹಳೆಯ ಕೇಸಿನ ದ್ವೇಷದಿಂದ ಮಹಿಳೆ ಹಾಗೂ ಆಕೆಯ ಮಗನ ಮೇಲೆ ಗುಂಪು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಶಿರೂರಿನಲ್ಲಿ ಸಂಭವಿಸಿದೆ.
ಪಿರ್ಯಾದಿದಾರರು ಶ್ರೀಮತಿ ಸೌಮ್ಯ ತಿಮ್ಮಪ್ಪ ಮೇಸ್ತ (51), ಕೋಟೇಮನೆ, ಶಿರೂರು ಇವರು,
ಸಂಜೆ ಸುಮಾರು 5:25ಕ್ಕೆ ಸೌಮ್ಯ ಅವರು ತಮ್ಮ ಮಗ ಶಶಿಕುಮಾರ್ (24) ನೊಂದಿಗೆ ಶಿರೂರು ಮಾರ್ಕೆಟ್ ರಸ್ತೆಯ ಬಳಿ ಇರುವ ಪಟಾಕಿ ಅಂಗಡಿ ಎದುರು ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಪಟಾಕಿ ಅಂಗಡಿ ಬಳಿ ನಿಂತಿದ್ದ ಆರೋಪಿ ಸಾಯಿರಾಮ್ ಮಹಾಬಲೇಶ್ವರನು ಪಿರ್ಯಾದಿದಾರರು ಹಾಗೂ ಮಗನನ್ನು ಉದ್ದೇಶಿಸಿ, “ಈ ಹಿಂದೆ ನೀವು ನಮ್ಮ ಮೇಲೆ ನೀಡಿದ ಕೇಸಿನಲ್ಲಿ ನಿಮಗೆ ಕೋರ್ಟಿಗೆ ಹೋಗದಂತೆ ಮಾಡುತ್ತೇವೆ” ಎಂದು ಹೇಳಿ ಇಬ್ಬರನ್ನು ತಡೆದು ನಿಲ್ಲಿಸಿ, ಸೌಮ್ಯ ಅವರ ಕುತ್ತಿಗೆಗೆ ಕೈ ಹಾಕಿ ದೂಡಿದ್ದಾನೆ.
ಆ ಸಮಯಕ್ಕೆ KA 20 MF 6388 ನೇ ಕಾರಿನಲ್ಲಿ ಬಂದ ಉಳಿದ ಆರೋಪಿಗಳು ಶಶಿಕುಮಾರ್ ಅವರನ್ನು ನೆಲಕ್ಕೆ ಕೆಡವಿ ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, “ನಿಮ್ಮನ್ನು ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.
ಪಿರ್ಯಾದಿದಾರರು ಆರೋಪಿತರ ಮೇಲೆ 2024 ರಲ್ಲಿ ಹಲ್ಲೆ ಮಾಡಿದ ಬಗ್ಗೆ ನೀಡಿದ್ದ ಕೇಸಿನ ಬಗ್ಗೆ ದ್ವೇಷದಿಂದ ಆರೋಪಿಗಳು ಈ ಕೃತ್ಯ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



