ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ವಶಕ್ಕೆ ಪಡೆದು, 213 ಗ್ರಾಂ ಗಾಂಜಾ ಸೇರಿದಂತೆ ವಿವಿಧ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ರಾತ್ರಿ ಕಾವೂರು ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಲೋಕನಾಥ ಕೆ. ಅವರು ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಮುಲ್ಲಕಾಡು ಮಹಾಲಿಂಗೇಶ್ವರ ದೇವಸ್ಥಾನ ದಾಟಿ ಮೇರಿಹಿಲ್ ಮೈದಾನದ ಮೂಲಕ ಮೇರಿಹಿಲ್ ಜಂಕ್ಷನ್ ಕಡೆಗೆ ತೆರಳುತ್ತಿದ್ದಾಗ, ರಾತ್ರಿ ಸುಮಾರು 10.15ಕ್ಕೆ ಡಾಂಬಾರು ರಸ್ತೆಯ ಎಡಭಾಗದಲ್ಲಿ KA 19 HB 1198 ನೋಂದಣಿ ಸಂಖ್ಯೆಯ ಆಕ್ಟಿವಾ 5G ಸ್ಕೂಟರ್ ನಿಲ್ಲಿಸಿಕೊಂಡು ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಕಂಡುಬಂದಿದ್ದಾರೆ.
ಪೊಲೀಸರು ಅವರನ್ನು ತಡೆದು ವಿಚಾರಿಸಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಿಬ್ಬಂದಿ ಸುತ್ತುವರಿದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳನ್ನು ಪಾಂಡೇಶ್ವರದ ಮೊಹಮ್ಮದ್ ಅಯಾನ್ (25) ಮತ್ತು ಹೊಯಿಗೆ ಬಜಾರ್ನ ಮೊಹಮ್ಮದ್ ನಿಸಾರ್ (27) ಎಂದು ಗುರುತಿಸಲಾಗಿದೆ. ಆರೋಪಿಗಳು ಅಕ್ರಮವಾಗಿ ಗಾಂಜಾ ಹೊಂದಿದ್ದು, ಯುವಕರಿಗೆ ಮಾರಾಟ ಮಾಡಲು ಕಾಯುತ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳಿಂದ 213 ಗ್ರಾಂ ಗಾಂಜಾ, ಪಾರದರ್ಶಕ ಜಿಪ್ ಕವರ್ಗಳು 9, OPPO A59 5G ಮೊಬೈಲ್, Samsung Galaxy F56 5G ಮೊಬೈಲ್ ಹಾಗೂ KA 19 HB 1198 ನೋಂದಣಿ ಸಂಖ್ಯೆಯ ಆಕ್ಟಿವಾ ಸ್ಕೂಟರ್ ಅನ್ನು ಪೊಲೀಸರು ಪಂಚರ ಸಮಕ್ಷಮದಲ್ಲಿ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.


