ಕಾರ್ಕಳ: ಪ್ರಯಾಣಿಕರು ಇಳಿಯುತ್ತಿದ್ದಾಗ ಮುನ್ಸೂಚನೆ ನೀಡದೇ ಬಸ್ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ.
ಮೃತರು ಮಂಜುನಾಥ ಶೆಟ್ಟಿಗಾರ (80) ಎಂದು ತಿಳಿದು ಬಂದಿದೆ.
ಅ.24 ರಂದು ಮಧ್ಯಾಹ್ನ 12 ಗಂಟೆಗೆ KA-20-AA-7547 ನಂಬರಿನ ಬಸ್ ಕಾರ್ಕಳ ಕಡೆಯಿಂದ ಜೋಡುರಸ್ತೆ ಕಡೆಗೆ ತೆರಳುತ್ತಿತ್ತು. ಕುಕ್ಕುಂದೂರು ಗ್ರಾಮದ ದಿಶಾ ಹಾರ್ಡ್ವೇರ್ ಬಳಿ ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿ ಬಾಗಿಲಿನಿಂದ ಮಂಜುನಾಥ ಶೆಟ್ಟಿಗಾರ ಅವರು ಇಳಿಯುತ್ತಿದ್ದಾಗ ಚಾಲಕ ಯಾವುದೇ ಮುನ್ಸೂಚನೆ ನೀಡದೇ ಅಜಾಗರೂಕತೆಯಿಂದ ಏಕಾಏಕಿ ಬಸ್ ಚಲಾಯಿಸಿದ್ದಾರೆ. ಇದರಿಂದ ಆಯತಪ್ಪಿ ಕೆಳಗೆ ಬಿದ್ದ ಅವರ ತಲೆಯ ಹಿಂಭಾಗಕ್ಕೆ ಗಂಭೀರ ರಕ್ತಗಾಯವಾಗಿದೆ.
ತಕ್ಷಣ ಅವರನ್ನು ಕಾರ್ಕಳದ ರೋಟರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ವಾಪಸ್ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆಯಲ್ಲಿದ್ದ ಅವರು ಅ.25 ರ ರಾತ್ರಿ 12:25ಕ್ಕೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


