ಕಾಪು: ಸಾಲದ ಸಮಸ್ಯೆಯಿಂದ ಮನನೊಂದ ಯುವಕನೊಬ್ಬ ಮನೆಯಿಂದ ನಾಪತ್ತೆಯಾಗಿರುವ ಘಟನೆ ಮೂಡಬೆಟ್ಟು ಗ್ರಾಮದಲ್ಲಿ ನಡೆದಿದೆ.
ಸರಕಾರಿಗುಡ್ಡೆ ಸುಭಾಷನಗರ, ಮೂಡಬೆಟ್ಟು ನಿವಾಸಿ ಮೊಹಮ್ಮದ್ ಇರ್ಷದ್ (35) ಅವರ ತಂದೆಯ ಅಕ್ಕನ ಮಗ ಮೊಹಮ್ಮದ್ ಹರ್ಷದ್ (24) ನಾಪತ್ತೆಯಾದವರು ಎಂದು ತಿಳಿಯಲಾಗಿದೆ.
ಹರ್ಷದ್ ತಂದೆ ಮೊಹಮ್ಮದ್ ಹೈದರ್ ಮತ್ತು ತಾಯಿ ನೆಬಿಸಾ ಅವರೊಂದಿಗೆ ವಾಸವಾಗಿದ್ದು, ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ದೂರುದಾರ ಇರ್ಷದ್ ಅ.30 ರಂದು ಕೆಲಸ ಮುಗಿಸಿ ಸಂಜೆ 7:30ಕ್ಕೆ ಮನೆಗೆ ಬಂದಾಗ, ಹರ್ಷದ್ ಅವರು ಚಿಕ್ಕಮ್ಮ ಸೇಲಿಕಾ ಅವರ ಮೊಬೈಲ್ಗೆ “ಎಲ್ಲಿಗೋ ಹೋಗುತ್ತಿದ್ದೇನೆ” ಎಂದು ಮೆಸೇಜ್ ಕಳುಹಿಸಿದ್ದರು. ಇರ್ಷದ್ ಕರೆ ಮಾಡಿ ವಿಚಾರಿಸಿದಾಗ ಹರ್ಷದ್ “ನಾನು ತುಂಬಾ ಸಾಲ ಮಾಡಿದ್ದೇನೆ, ನನ್ನಿಂದ ಮನೆಯವರಿಗೆ ತೊಂದರೆಯಾಗಿದೆ, ಎಲ್ಲೋ ದೂರದಲ್ಲಿದ್ದೇನೆ” ಎಂದು ತಿಳಿಸಿದ್ದಾನೆ. ಇರ್ಷದ್ ಧೈರ್ಯ ತುಂಬಿ “ಏನೂ ಆಗುವುದಿಲ್ಲ, ಮನೆಗೆ ಬಾ” ಎಂದು ಹೇಳಿದರೂ ಹರ್ಷದ್ ಮನೆಗೆ ಬಂದಿಲ್ಲ.
ತಾನು ಚಲಾಯಿಸುತ್ತಿದ್ದ ಆಟೋರಿಕ್ಷಾವನ್ನು ಮನೆಯ ಬಳಿಯೇ ನಿಲ್ಲಿಸಿ, ಅ.30 ರ ಮಧ್ಯಾಹ್ನ 12:30ಕ್ಕೆ ಮನೆಯಿಂದ ಹೋಗಿದ್ದ ಹರ್ಷದ್ ರಾತ್ರಿ 9:30 ಆದರೂ ವಾಪಸ್ ಬಂದಿಲ್ಲ.
ಚಹರೆ ಗುರುತು:
ಮೈಬಣ್ಣ: ಬಿಳಿ, ಭಾಷೆ: ಕನ್ನಡ, ತುಳು, ಬ್ಯಾರಿ, ಧರಿಸಿದ್ದ ಬಟ್ಟೆ: ಬಿಳಿ ಶರ್ಟ್ ಮತ್ತು ನೀಲಿ ಪ್ಯಾಂಟ್, ಎತ್ತರ: 5.2 ಅಡಿ, ವಿದ್ಯಾಭ್ಯಾಸ: 6ನೇ ತರಗತಿ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಾಪು ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.



