ಕಾಪು: ಉಡುಪಿಯ ಉದ್ಯಮಿಯೊಬ್ಬರಿಗೆ ಸೇರಿದ ತುಲಂ ಕಾಟೇಜಸ್ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿ, ಎರಡು ಕಾಟೇಜ್ಗಳನ್ನು ಸಂಪೂರ್ಣ ಧ್ವಂಸಗೊಳಿಸಿ, 20 ಲಕ್ಷ ರೂ. ನಷ್ಟ ಉಂಟುಮಾಡಿದ ಘಟನೆ ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೂರುದಾರ ಹರ್ಷಿತ್ ಎಸ್. ಕುಂದರ್ (ಸಂಜೀವಿನಿ, ಬಿಲ್ಲುಗುಡ್ಡೆ, ಕಲ್ಮಾಡಿ, ಉಡುಪಿ) ನೀಡಿದ ದೂರಿನ ವಿವರ:
ಹರ್ಷಿತ್ ಅವರು ತುಲಂ ಕಾಟೇಜಸ್ ಹೋಂಸ್ಟೇ ಮಾಲೀಕರು. ಅ.31 ರಂದು ಮಧ್ಯಾಹ್ನ 1 ಗಂಟೆಗೆ ಅವರ ಸ್ನೇಹಿತರೊಬ್ಬರು ಕರೆ ಮಾಡಿ ಹೋಂಸ್ಟೇ ಆಸ್ತಿಯಲ್ಲಿ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಒಂದು ಗಂಟೆಯೊಳಗೆ ಹರ್ಷಿತ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಆಸ್ತಿಯೊಳಗೆ ಪ್ರವೇಶಿಸಿ ಉದ್ದೇಶಪೂರ್ವಕವಾಗಿ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ.
ಎರಡು ಕಾಟೇಜ್ಗಳ ಗೋಡೆಗಳನ್ನು ಸಂಪೂರ್ಣವಾಗಿ ಒಡೆದು ಹಾಕಲಾಗಿದೆ,ಎರಡು ಏರ್ ಕಂಡಿಷನರ್ (AC) ಗಳನ್ನು ಕಳವು ಮಾಡಲಾಗಿದೆ,ಬಾತ್ರೂಮ್ನ ಟೈಲ್ಸ್, ಕಮೋಡ್, ಶವರ್, ವಾಶ್ಬೇಸಿನ್, ಕನ್ನಡಿಗಳು, ಬಾಗಿಲುಗಳು ಸೇರಿದಂತೆ ಒಳಗಿನ ಎಲ್ಲಾ ಸಾಮಗ್ರಿಗಳನ್ನು ಒಡೆದು ಹಾಳು ಮಾಡಲಾಗಿದೆ,ಕಟ್ಟಡದ ಅವಶೇಷಗಳು ಆವರಣದಾದ್ಯಂತ ಚದುರಿದ್ದವು,ಕೃತ್ಯದ ಸಾಕ್ಷ್ಯ ಮರೆಮಾಚಲು CCTV ಕ್ಯಾಮೆರಾಗಳನ್ನೂ ಕಳವು ಮಾಡಿ ತೆಗೆದುಕೊಂಡು ಹೋಗಿದ್ದಾರೆ.
ಜೀವ ಬೆದರಿಕೆ ಹಿನ್ನೆಲೆ ಇದೆಯೇ?
ಘಟನೆ ನಡೆಯುವ ಕೆಲವು ದಿನಗಳ ಮೊದಲು ಪಿತ್ರೋಡಿ, ಕಲ್ಪೆಬೈಲ್ ನಿವಾಸಿ ರಾಮಚಂದ್ರ ಅವರ ಮಗ ಗೌತಮ್ನಿಂದ ಜೀವ ಬೆದರಿಕೆ ಕರೆಗಳು ಬಂದಿದ್ದವು ಎಂದು ದೂರುದಾರರು ಆರೋಪಿಸಿದ್ದಾರೆ. “ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಪದೇ ಪದೇ ಬೆದರಿಕೆ ಹಾಕಿದ್ದರು ಎಂದೂ ದೂರಿನಲ್ಲಿ ತಿಳಿಸಿದ್ದಾರೆ. ಇದೇ ದ್ವೇಷದಿಂದಲೇ ಈ ಕೃತ್ಯ ನಡೆದಿದ್ದು, ತನ್ನನ್ನು ಬೆದರಿಸಿ ಆರ್ಥಿಕ ನಷ್ಟ ಉಂಟುಮಾಡುವ ದುರುದ್ದೇಶದಿಂದ ಮಾಡಲಾಗಿದೆ ಎಂದು ಹರ್ಷಿತ್ ಶಂಕೆ ವ್ಯಕ್ತಪಡಿಸಿದ್ದಾರೆ.
ಶಂಕಿತರ ಹೆಸರು:
ಈ ಕೃತ್ಯದಲ್ಲಿ ಗೌತಮ್ (ರಾಮಚಂದ್ರ ಅವರ ಮಗ), ಲಕ್ಷ್ಮಣ್ ಶ್ರೀಯಾನ್, ಚಂದ್ರಕಾಂತ್ ಮಂಡನ್, ವಿಷ್ಣು ಶ್ರೀಯಾನ್, ಪಾಂಡು ಶ್ರೀಯಾನ್ ಭಾಗಿಯಾಗಿರುವ ಶಂಕೆ ಇದೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ.
ಈ ದಾಳಿಯಿಂದ ಸುಮಾರು 20 ಲಕ್ಷ ರೂ. ನಷ್ಟವಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



