ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಮಾಳ ಗ್ರಾಮದಲ್ಲಿ ನಡೆದಿದೆ.
ಮೃತರು ಚಿಕ್ಕಮಗಳೂರು ತನಿಗೆಬೈಲು ಮೂಲದ ಯಶೋದಮ್ಮ (68). ಅವರು ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಜೊತೆಗೆ ಉಬ್ಬಸ, ಬಿಪಿ, ಶುಗರ್ ಮತ್ತು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದರು.
15 ದಿನಗಳ ಹಿಂದೆ ಗಾಜರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಗ ಎ.ಕೆ. ಪ್ರಶಾಂತ್ (44) ಅವರ ಮನೆಗೆ ಬಂದು ಔಷಧೋಪಚಾರ ಪಡೆಯುತ್ತಿದ್ದರು.
ಅಕ್ಟೋಬರ್ 5ರಂದು ರಾತ್ರಿ 10:15ಕ್ಕೆ ಪ್ರಶಾಂತ್ ಅವರು ಪತ್ನಿ ಜೊತೆ ಬಜಗೋಳಿ ಅಂಗಡಿ ಕೆಲಸ ಮುಗಿಸಿ ಮನೆಗೆ ಬಂದಾಗ ತಾಯಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಸಂಜೆ 7 ಗಂಟೆಯಿಂದ ರಾತ್ರಿ 10:15ರ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮನೆಯಲ್ಲಿದ್ದ ಮೊಮ್ಮಕ್ಕಳಾದ ಪ್ರಾರ್ಥನಾ ಮತ್ತು ಸ್ಪೂರ್ತಿ ಬೇರೆ ಕೋಣೆಯಲ್ಲಿ ಮಲಗಿದ್ದರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 54/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ.



