Home Latest ಮಂಗಳೂರು : ಖ್ಯಾತ ಶಿಕ್ಷಣ ತಜ್ಞ ಡಾ. ಸಿಎ ಎ. ರಾಘವೇಂದ್ರ ರಾವ್ ನಿಧನ…!!

ಮಂಗಳೂರು : ಖ್ಯಾತ ಶಿಕ್ಷಣ ತಜ್ಞ ಡಾ. ಸಿಎ ಎ. ರಾಘವೇಂದ್ರ ರಾವ್ ನಿಧನ…!!

ಮಂಗಳೂರು : ಖ್ಯಾತ ಶಿಕ್ಷಣ ತಜ್ಞ ಮತ್ತು ಲೋಕೋಪಕಾರಿ ಉದ್ಯಮಿ ಡಾ. ಸಿಎ ಎ. ರಾಘವೇಂದ್ರ ರಾವ್ ಫೆ. 17, ಮಂಗಳವಾರ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.

ಎಲ್ಲರಿಗೂ ಗುಣಮಟ್ಟದ ಹಾಗೂ ಸುಸ್ಥಿರ ಶಿಕ್ಷಣವನ್ನು ನೀಡಬೇಕು ಎಂಬ ಮಹತ್ತರ ದೃಷ್ಟಿಕೋನದೊಂದಿಗೆ ಅವರು 1988ರಲ್ಲಿ ಎ ಶಾಮ ರಾವ್ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನದ ಅಡಿಯಲ್ಲಿ ರೂಪುಗೊಂಡ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜುಗಳು ಇಂದು ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಗೆ ಬದ್ಧವಾಗಿರುವ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾಗಿ ಬೆಳೆದಿವೆ.

ಕೇವಲ ಏಳು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶ್ರೀನಿವಾಸ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಬಳಿಕ ಹಲವು ವೃತ್ತಿಪರ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಾಗಿ ವಿಸ್ತರಿಸಿ ರಾಜ್ಯದ ಪ್ರಮುಖ ಶಿಕ್ಷಣ ಜಾಲವಾಗಿ ರೂಪುಗೊಂಡಿತು. 1937ರ ಅಕ್ಟೋಬರ್ 16ರಂದು ಉಡುಪಿಯ ಪೇಜಮಂಗೂರು ಗ್ರಾಮದ ಬೆನಗಲ್‌ನಲ್ಲಿ ದಿವಂಗತ ಎ. ಶಾಮ ರಾವ್ ಹಾಗೂ ಇಂದಿರಮ್ಮ ದಂಪತಿಗೆ ಜನಿಸಿದ ಅವರು, ಇನ್ನಂಜೆಯ ಎಸ್‌ವಿಎಸ್ ಪ್ರಾಥಮಿಕ ಶಾಲೆ ಮತ್ತು ಎಸ್‌ವಿಎಚ್ ಪ್ರೌಢಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಬಳಿಕ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದ ಅವರು ಮಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಅಭ್ಯಾಸ ಮಾಡಿದರು.

1965ರಲ್ಲಿ ಮಂಗಳೂರಿನ ಫೆಲಿಕ್ಸ್ ಪೈ ಬಜಾರ್‌ನಲ್ಲಿ ಸ್ವತಂತ್ರ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿಜೀವನ ಆರಂಭಿಸಿದ ಅವರು, ನಂತರ ಬಹು ಶಾಖೆಗಳು ಹಾಗೂ ವಿಶಾಲ ಸಿಬ್ಬಂದಿ ಬಳಗವನ್ನು ಹೊಂದಿದ M/S ರಾಘವೇಂದ್ರ ಚಾರ್ಟರ್ಡ್ ಅಕೌಂಟೆಂಟ್‌ಗಳ ಹಿರಿಯ ಪಾಲುದಾರರಾದರು. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಗೆ ಆಯ್ಕೆಯಾಗಿ, CA ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ SIRC ಕಾರ್ಯದರ್ಶಿ ಸೇರಿದಂತೆ ಅನೇಕ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿಯೂ ಅವರು ಮಹತ್ವದ ಪಾತ್ರವಹಿಸಿದ್ದರು. ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಕಾರ್ಯದರ್ಶಿ (1983-84), ಉಪಾಧ್ಯಕ್ಷ (1984-85) ಹಾಗೂ ಅಧ್ಯಕ್ಷ (1985-87) ಆಗಿ ಸೇವೆ ಸಲ್ಲಿಸಿ, ಪ್ರಾದೇಶಿಕ ಹಾಗೂ ರಾಜ್ಯ ಮಟ್ಟದ ಅನೇಕ ಸಲಹಾ ಸಮಿತಿಗಳಲ್ಲಿ ಸಕ್ರಿಯರಾಗಿದ್ದರು.