Home Crime ಕುಂದಾಪುರ: ಅಡ್ಡಾದಿಡ್ಡಿ ಟಿಪ್ಪರ್ ಚಾಲನೆ : ಸ್ಕೂಟರ್‌ಗೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ...

ಕುಂದಾಪುರ: ಅಡ್ಡಾದಿಡ್ಡಿ ಟಿಪ್ಪರ್ ಚಾಲನೆ : ಸ್ಕೂಟರ್‌ಗೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ : 3 ಮಂದಿ ಬಂಧನ….!!

ಕುಂದಾಪುರ: ಅಕ್ರಮವಾಗಿ ಕೋಜೆ ಮಣ್ಣು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್‌ಗಳು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ವಿವರ:
ಅ.30 ರಂದು ಬೆಳಿಗ್ಗೆ 8:45ಕ್ಕೆ ರಾಜ್ಯ ಹೆದ್ದಾರಿ 52 ರಲ್ಲಿ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕುಂದಾಪುರ ಕಡೆಯಿಂದ ಎರಡು ಟಿಪ್ಪರ್‌ಗಳು ಮಾನವ ಪ್ರಾಣಕ್ಕೆ ಅಪಾಯವಾಗುವ ರೀತಿ ವೇಗವಾಗಿ ಬರುತ್ತಿದ್ದವು. ಎದುರಿಗೆ KSRTC ಬಸ್ ಬರುವುದನ್ನು ಕಂಡು ಮುಂದಿದ್ದ KL58-X-8347 ನಂಬರ್ ಟಿಪ್ಪರ್ ಚಾಲಕ ಲಾರಿಯನ್ನು ನಿಧಾನ ಮಾಡಿದ್ದಾನೆ. ಆಗ ಹಿಂದಿನಿಂದ ಅತಿವೇಗವಾಗಿ ಬರುತ್ತಿದ್ದ KA19-AB-3015 ನಂಬರ್ ಟಿಪ್ಪರ್ ಚಾಲಕ ಮುಂದಿನ ಲಾರಿಗೆ ಗುದ್ದಿ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿದ್ದಾನೆ.

ಈ ವೇಳೆ ಕಂಡ್ಲೂರು ಕಡೆಯಿಂದ ಬಸ್ರೂರು ಕಡೆಗೆ ಕಾಲೇಜಿಗೆ ಹೋಗುತ್ತಿದ್ದ KA20-HC-8075 ನಂಬರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಸವಾರರಾದ ಟಿ.ಕೆ. ಮೊಹಮ್ಮದ್ ಶಯಾನ್ ಮತ್ತು ಮೊಹಮ್ಮದ್ ರಯಾನ್ ಗಂಭೀರ ಗಾಯಗೊಂಡು ಮಣಿಪಾಲ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತನಿಖೆಯಲ್ಲಿ ಎರಡೂ ಟಿಪ್ಪರ್‌ಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೋಜೆ ಮಣ್ಣು ತುಂಬಿಕೊಂಡು ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದರಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿತ ಟಿಪ್ಪರ್ ಚಾಲಕರಾದ ನಾಗರಾಜ, ರತ್ವೀಜ್ ಹಾಗೂ ಕೋಜೆ ಮಣ್ಣು ತೆಗೆದ ಜಾಗದ ಮಾಲೀಕ ಅಜಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಬ್ರಹ್ಮಾವರ ತಾಲೂಕಿನ ಪೇತ್ರಿ ಎಂಬಲ್ಲಿ ಅಕ್ರಮ ಕೋಜೆ ಮಣ್ಣು ಸಾಗಾಟದ ಬಗ್ಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.