ಶಿರ್ವ: ಉಡುಪಿ ಜಿಲ್ಲೆಯ ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಕಟ್ಟಿಂಗೇರಿ
ಗ್ರಾಮದಲ್ಲಿರುವ ಮೂಡುಬೆಳ್ಳೆ ಪೇಟೆಯ ವೈನ್ ಶಾಪ್ ನಲ್ಲಿ ನಿಯಮವನ್ನು ಉಲ್ಲಂಘಿಸಿ ಮದ್ಯಪಾನವನ್ನು ಮಾಡಲು ಅವಕಾಶವನ್ನು ಒದಗಿಸಲಾಗುತ್ತಿದೆ ಮತ್ತು ಸಮೀಪದ ಕಟ್ಟಡದಲ್ಲಿ ಮದ್ಯದ ಬಾಟಲಿಗಳನ್ನು ಅನಧಿಕೃತವಾಗಿ ಶೇಖರಿಸಿ ಇಡಲಾಗಿದೆ ಹಾಗೂ ಮುಂಜಾನೆ ಗೂಡಂಗಡಿಗಳಲ್ಲಿ ಮದ್ಯವನ್ನು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತದೆ ಎಂಬ ದೂರಿನ ಆಧಾರದಲ್ಲಿ ಅಬಕಾರಿ ಉಡುಪಿ ಜಿಲ್ಲಾ ಉಪ ಆಯುಕ್ತರಾದ ಶ್ರೀನಿವಾಸ ಟಿ.ಕೆ ಅವರು ಅ. 29ರಂದು ರಾತ್ರಿ ವೇಳೆ ವೈನ್ ಶಾಪಿಗೆ ದಾಳಿ ನಡೆಸಿ ಎಫ್ಐಆರ್ ದಾಖಲಿಸಿದ್ದಾರೆ.
ಸ್ಥಳದಲ್ಲಿ ಮದ್ಯದ ಖಾಲಿ ಬಾಟಲಿಗಳಿರುವ ರಾಶಿಯ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲಿಸಿದ ಬಗ್ಗೆ ಮಾಹಿತಿ ಇಲ್ಲ.
ಮದ್ಯಮುಕ್ತ ಗ್ರಾಮ ಅಭಿಯಾನದ ಮೊದಲ ಹಂತದಲ್ಲಿ ವೈನ್ ಶಾಪಿನಲ್ಲಿ ಮದ್ಯಪಾನ ಮಾಡುವುದಕ್ಕೆ ಅವಕಾಶ ನೀಡುವುದರ ವಿರುದ್ಧ ಹಾಗೂ ಬಾರ್ ವೈನ್ ಶಾಪ್ ತೆರೆಯುವ ಮುನ್ನ ಗೂಡಂಗಡಿ ಹಾಗೂ ಹೋಟೆಲ್ ಪಕ್ಕದಲ್ಲಿ ಅನಧಿಕೃತವಾಗಿ ಮಧ್ಯಮಾರಾಟ ಮಾಡುವುದರ ವಿರುದ್ಧ ಕ್ರಮಕ್ಕೆ ಗ್ರಾಮದ ಮಹಿಳೆಯರು ಮುಂದಾಗಿದ್ದಾರೆ.
ವೈನ್ ಶಾಪಿನಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟದಕ್ಕೆ ಸದ್ಯ ಅಬಕಾರಿ ಡಿಸಿ ದಾಳಿಯಿಂದ ಕಡಿವಾಣ ಬಿದ್ದಿದೆ. ಆದರೆ ಇದು ಎಷ್ಟು ದಿನವೋ ತಿಳಿದಿಲ್ಲ. ಸರ್ಕಲ್ 1 ಇದರ ಅಬಕಾರಿ ನಿರೀಕ್ಷಕರು ಕಠಿನ ಕ್ರಮ, ತಪಾಸಣೆ ಕೈಗೊಂಡರಷ್ಟೇ ಅನುಷ್ಠಾನ ಸಾಧ್ಯ. ದಾಳಿಗೆ ಬರುವ ಮೊದಲೇ ಅಕ್ರಮ ಮಾಡುವವರಿಗೆ ಸೂಚನೆ ಬಂದರೆ ಎಲ್ಲವೂ ವ್ಯರ್ಥ.
ನಿನ್ನೆ ಅಬಕಾರಿ ಡಿಸಿ ದಾಳಿ ಹಿನ್ನೆಲೆಯಲ್ಲಿ ವೈನ್ ಶಾಪ್ ನಲ್ಲಿ ಮದ್ಯಪಾನಕ್ಕೆ ಅವಕಾಶ ಇರಲಿಲ್ಲ. ಇದರಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ವೈನ್ ಶಾಪ್ ನಲ್ಲಿ ಮದ್ಯಪಾನ ಮಾಡಿ ನಡೆದುಕೊಂಡು ಬರುವ ಮಹಿಳೆಯರು, ಮಕ್ಕಳಿಗೆ ಹೆಸರಿಟ್ಟು ಕರೆಯುವ ಚಾಳಿಯನ್ನು ಮಹಿಳೆಯರು ಖಂಡಿಸಿ ಅಬಕಾರಿ ಡಿಸಿಗೆ ದೂರು ನೀಡಿದ್ದಾರೆ.
ವೈನ್ ಶಾಪ್ ನಿಂದ ಮದ್ಯ ಪಡೆದು ಕೆಲವು ಅಂಗಡಿಯೊಳಗೆ, ಹೋಟೆಲ್ ಸಂದಿಯಲ್ಲಿ ಮದ್ಯಪಾನ ಮಾಡುವವರನ್ನು ಪೊಲೀಸ್ ಬೀಟ್ ವ್ಯವಸ್ಥೆ ಮೂಲಕ ಕಡಿವಾಣ ಹಾಕಬೇಕು ಎಂದು ಸಂಯಮ ಮೂಡುಬೆಳ್ಳೆ ಆಗ್ರಹಿಸಿ ಅಬಕಾರಿ ಡಿಸಿಗೆ ಲಿಖಿತ ದೂರು ನೀಡಿದೆ.



