ಉಡುಪಿ: ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲು ದ್ವಜಕಟ್ಟೆ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಕರವೇ ಉಡುಪಿ ಜಿಲ್ಲಾ ನಿಯೋಗ ಉಡುಪಿ ನಗರಸಭೆ ಪೌರಾಯುಕ್ತರಲ್ಲಿ ಮನವಿ ಮಾಡಿದೆ.
ನವೆಂಬರ್ 1ರಂದು ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯ ಗೌರವವನ್ನು ಸಾರುವ ಉದ್ದೇಶದಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಆದ್ದರಿಂದ, ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳದಲ್ಲಿ ದ್ವಜಕಟ್ಟೆ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಕರ್ನಾಟಕ ರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಲು ಅನುಮತಿ ನೀಡಬೇಕೆಂದು ಮನವಿಯಲ್ಲಿ ಕರವೇ ಮುಖಂಡರು ಒತ್ತಾಯ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ ಪೂಜಾರಿ ,ಶಾಶ್ವತ ಧ್ವಜಕಟ್ಟೆ ನಿರ್ಮಿಸಿ ಕನ್ನಡಕ್ಕೆ ಗೌರವ ಸಲ್ಲಿಸಲು ತೀರ್ಮಾನಿಸಿದ್ದೇವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ ನಾವು ಅನುಮತಿ ಕೇಳಿದ್ದೇವೆ. ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಧ್ವಜಕಟ್ಟೆ ನಿರ್ಮಾಣ ಆಗಿದೆ. ಜಿಲ್ಲೆಯಲ್ಲಿ ಶಾಶ್ವತ ದ್ವಜಕಟ್ಟೆ ನಿರ್ಮಾಣ ಆಗಬೇಕು ಎಂಬುದು ನಮ್ಮ ಹಲವು ವರ್ಷಗಳ ಬೇಡಿಕೆ. ಪೌರಾಯುಕ್ತರು ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಗೋಪಾಲ್ ಮೆಂಡನ್, ನಗರ ಅಧ್ಯಕ್ಷ ಅಜಾರುದ್ಧಿನ್ ಜಿಲ್ಲಾ ಮುಖಂಡ ಕುಶಾಲ್ ಅಮೀನ್, ಉಪಾಧ್ಯಕ್ಷ ಸಾಬುದ್ದಿನ್, ಕಾರ್ಯದರ್ಶಿ ಮಜೀದ್, ಮಹಿಳಾ ಜಿಲ್ಲಾಧ್ಯಕ್ಷೆ ಅಶ್ವಿನಿ ನಾಯ್ಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನುಷಾ ಆಚಾರ್ ಪಳ್ಳಿ, ಜಿಲ್ಲಾ ಪ್ರಧಾನ ಸಂಚಾಲಕಿ ಜಯಶ್ರೀ ಸುವರ್ಣ, ಉಪಾಧ್ಯಕ್ಷೆ ಗೀತಾ ಪೂಜಾರಿ, ಗೌರವ ಸಲಹೆಗಾರರಾದ ಸುನಂದಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.










