ಉಡುಪಿ: ಸಂವಿಧಾನಿಕ ಪ್ರಜಾಪ್ರಭುತ್ವ ರಕ್ಷಣೆಗೆ ದಿ.23 ಅಕ್ಟೋಬರ್ 2026ರಂದು ‘ಊರೂರು ಜಂತರ್ ಮಂತರ್’ ದೇಶವ್ಯಾಪಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಹಬಾಳ್ವೆ ಸಂಚಾಲಕ ಕೆ.ಫಣಿರಾಜ್ ಮಾಹಿತಿ ನೀಡಿದರು.
ಅವರು ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಅಕ್ರಮ SIR ರದ್ಧತಿ ಹಾಗು ಅದರ ರುವಾರಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಪದಾಚ್ಯುತಿ, ಕಾನೂನುಕ್ರಮಗಳಿಗೆ ಆಗ್ರಹಿಸಿ ದಿ. 23 ಅಕ್ಟೋಬರ್ 2026ರಂದು ದೇಶವ್ಯಾಪಿ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಸಲು ರೈತ,ಕಾರ್ಮಿಕ, ಮಹಿಳಾ ಸಂಘಟನೆಗಳು, ನಾಗರಿಕ ವೇದಿಕೆಗಳು ಹಾಗು ರಾಜಕೀಯ ಪಕ್ಷಗಳು ಒಗ್ಗೂಡಿ ಕರೆ ನೀಡಿವೆ. ಈ ಪ್ರಯುಕ್ತ ಸಹಬಾಳ್ವೆ ಉಡುಪಿ ಹಾಗು ಸಹಭಾಗಿ ಸಂಘಟನೆ-ಪಕ್ಷಗಳ ಐಕ್ಯ ವೇದಿಕೆಯ ವತಿಯಿಂದ ಕಾಲ್ನಡಿಗೆ ಜಾಥ ಮತ್ತು ಸಾರ್ವಜನಿಕ ಸಭೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಬೇಡಿಕೆಯ ಪ್ರಕಾರ ಅಕ್ರಮ SIR ರದ್ದುಗೊಳಿಸುವುದು. SIRನ್ನು ಸಂವಿಧಾನಕ್ಕೆ ವಿರುದ್ಧವಾಗಿ ಆಯೋಜಿಸಿ 13 ಕೋಟಿ ಮತದಾರರ ಮತದಾನದ ಹಕ್ಕನ್ನು ಕಿತ್ತುಕೊಂಡಿರುವ ಗ್ಯಾನೇಶ್ ಕುಮಾರ್ ರಾಜಿನಾಮೆ ನೀಡಬೇಕು ಎಂದರು.
ಅದರೊಂದಿಗೆ ನಡೆಸಿದ ಅಕ್ರಮಗಳಿಗೆ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನುಕ್ರಮ ಜರುಗಿಸಬೇಕು.2023ರ ಚುನಾವಣಾ ಆಯುಕ್ತರ ನೇಮಕ ನಿಯಮವು ಸಂವಿಧಾನದ ಆಶಯಕ್ಕೆ ಮಾರಕವಾಗಿದ್ದು, ಆ ನಿಯಮವನ್ನು ರದ್ದು ಪಡಿಸಬೇಕು. ನಿಷ್ಪಕ್ಷಪಾತವಾದ ಚುನಾವಣಾ ಆಯುಕ್ತರ ನೇಮಕ ನಿಯಮವನ್ನು ರಚಿಸಬೇಕು ಎಂದರು.
ಪ್ರಜಾಪ್ರಭುತ್ವ ಮಾರ್ಗದಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನು ದಮನಿಸಲು ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಸಭೆ ನಿಷೇಧ ಹೇರಿರುವ ಒಕ್ಕೂಟ ಸರಕಾರದ ಕ್ರಮವನ್ನು ಧಿಕ್ಕರಿಸುವ ಸಲುವಾಗಿ ‘ಪ್ರತಿ ಊರು ಜಂತರ್ ಮಂತರ್’ ಘೋಷ ವಾಕ್ಯದಡಿ ಪ್ರತಿಭಟನೆಯು ಆಯೋಜಿತವಾಗುತ್ತಿದೆ ಎಂದು ತಿಳಿಸಿದರು.
ದಿ. 23 ಅಕ್ಟೋಬರ್ 2026ರಂದು ಮಧ್ಯಾಹ್ನ 3.30ಕ್ಕೆ ಕ್ಲಾಕ್ ಟವರ್ ಗಾಂಧಿ ಪ್ರತಿಮೆಗೆ ಗೌರವಾರ್ಪಣೆ, ಕಾಲ್ನಡಿಗೆ ಮೆರವಣಿಗೆ ಆರಂಭ
ತ್ರಿವೇಣಿ ವೃತ್ತ, ಕೆ.ಎಂ.ಮಾರ್ಗ, ಹಳೆ ಡಯಾನ ವೃತ್ತ, ಕೋರ್ಟ್ ರಸ್ತೆ ಮಾರ್ಗವಾಗಿ ಮೆರವಣಿಗೆ
ಜೋಡು ಕಟ್ಟೆ ಎದುರು ಪ್ರತಿಭಟನಾ ಸಭೆ:
ಸುದ್ದಿಗೋಷ್ಠಿಯಲ್ಲಿ ಸಂದರ್ಭದಲ್ಲಿ ಸುಂದರ್ ಮಾಸ್ತರ್, ಅಫ್ವಾನ್ ಬಿ ಹೂಡೆ, ಅಮೃತ್ ಶೆಣೈ, ಲೂಯಿಸ್ ಡಿಸೋಜಾ, ಚಾರ್ಲ್ಸ್ ಅಂಬ್ಲೇರ್, ಇದ್ರಿಸ್ ಹೂಡೆ,ಮುಹಮ್ಮದ್ ಅಶ್ರಫ್, ಸುರೇಶ್ ಕಲ್ಲಾಗರ, ರಮೇಶ್ ಕಾಂಚನ್, ಮುಹಮ್ಮದ್ ಮೌಲ, ಇಸ್ಮಾಯಿಲ್ ಕಟಪಾಡಿ, ಅಝೀಜ್ ಉದ್ಯಾವರ, ಹರಿಪ್ರಸಾದ್ ರೈ, ಗಣೇಶ್ ನೇರ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



