ಮಲ್ಪೆ: ತೆಂಕನಿಡಿಯೂರು ಗ್ರಾಮದ ತೊಟ್ಟಂನಲ್ಲಿ ಸಿಗರೇಟ್ ಸೇದುವ ವಿಚಾರಕ್ಕೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ಅಣ್ಣನ ಮಗ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ದೂರುದಾರ ಚಂದ್ರಕಾಂತ್ (54) ತೆಂಕನಿಡಿಯೂರು ಗ್ರಾಮದವರು. ಅ.22 ರಂದು ರಾತ್ರಿ 10:30ಕ್ಕೆ ಕೆಲಸ ಮುಗಿಸಿ ಮನೆಗೆ ಬಂದಾಗ ಅಣ್ಣ ರವಿ ಪ್ರಕಾಶ್ ಅವರ ಅಂಗಡಿ ಬಳಿ 5-6 ಜನರು ಸಿಗರೇಟ್ ಸೇದುತ್ತಿದ್ದರು. ಇದನ್ನು ಕಂಡು ಚಂದ್ರಕಾಂತ್ ಅಣ್ಣನಿಗೆ “ಅಂಗಡಿ ಎದುರು ಏಕೆ ಇವರನ್ನು ಇರಿಸಿಕೊಂಡಿದ್ದೀರಿ” ಎಂದು ಪ್ರಶ್ನಿಸಿದ್ದಾರೆ. ಆಗ ಅಣ್ಣನ ಮಗ ಆಶ್ರಿತ್ ರಾವ್ ದೂರುದಾರರನ್ನು ನಿಂದಿಸಿದ್ದಾರೆ.
ನಂತರ ದೂರುದಾರರು ಮನೆ ಜಗಲಿ ಮೇಲೆ ಕುಳಿತಿದ್ದಾಗ 3 ಜನರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಶ್ರಿತ್ ರಾವ್ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದು, ಕುತ್ತಿಗೆ ಮತ್ತು ಎಡ ಭುಜಕ್ಕೆ ತರಚಿದ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



