ಬೈಂದೂರು: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ತಲವಾರು ಬೀಸಿ ಕೊಲೆ ಮಾಡಲು ಯತ್ನಿಸಿದ ಘಟನೆ ನಾವುಂದದಲ್ಲಿ ಸಂಭವಿಸಿದೆ.
ದೂರುದಾರ ಜಿ.ಎಂ. ಸತ್ತಾರ್ (60), ಕೋಯನಗರ, ನಾವುಂದ ಗ್ರಾಮದವರು. ಆರೋಪಿಗಳೆಂದರೆ ಸವದ್ @ ಅಚ್ಚು ಬಡಾಕೆರೆ, ನಾವುಂದ ಹಾಗೂ ಇಬ್ಬರು ಸಹಚರರು ಎಂದು ಗುರುತಿಸಲಾಗಿದೆ.
ಬೆಳಗ್ಗೆ 9:30ಕ್ಕೆ ಸತ್ತಾರ್ ಅವರು ತಮ್ಮ ಸ್ಕೂಟರ್‌ನಲ್ಲಿ ಕೋಯನಗರ ಮನೆಯಿಂದ ನಾವುಂದ ಕಡೆಗೆ ಬರುತ್ತಿದ್ದರು. ನಾವುಂದ ಖತಿಜಾ ಅವರ ಮನೆಯ ಮುಂದಿನ ಗೇಟಿನ ಬಳಿ ಬರುತ್ತಿದ್ದಾಗ ಎದುರಿನಿಂದ KA-20 EX-9827 ನಂಬರಿನ ಸ್ಕೂಟರ್‌ನಲ್ಲಿ ಬಂದ ಸವದ್ ಹಾಗೂ ಇಬ್ಬರು, ಸತ್ತಾರ್ ಅವರ ಬೈಕ್‌ಗೆ ತಮ್ಮ ಬೈಕ್ ಅಡ್ಡ ತಂದು ತಡೆದು ನಿಲ್ಲಿಸಿದರು.
ನಂತರ ಸ್ಕೂಟರ್‌ನಲ್ಲಿದ್ದ ತಲವಾರು ತೆಗೆದು “ಇಲ್ಲಿಯೇ ಕಡಿದು ಕೊಂದು ಮುಗಿಸುತ್ತೇನೆ” ಎಂದು ಹೇಳಿ ಸತ್ತಾರ್ ಅವರ ಕಡೆಗೆ ತಲವಾರು ಬೀಸಿದರು. ಸತ್ತಾರ್ ತಪ್ಪಿಸಿಕೊಂಡು ಖತಿಜಾ ಅವರ ಮನೆ ಗೇಟಿನೊಳಗೆ ಓಡಿ ಹೋದರು.
ಆರೋಪಿಗಳು ಅವರನ್ನು ಹಿಡಿಯಲು ಖತಿಜಾ ಅವರ ಕಾಂಪೌಂಡ್ ಒಳಗೆ ಅತಿಕ್ರಮ ಪ್ರವೇಶ ಮಾಡಿ ಬೆನ್ನಟ್ಟಿದರು. ಸತ್ತಾರ್ ತಂಗಿಯ ಮನೆಯೊಳಗೆ ಹೋಗಿ ತಪ್ಪಿಸಿಕೊಂಡರು. ನಂತರ ಆರೋಪಿಗಳು “ಈಗ ತಪ್ಪಿಸಿಕೊಂಡೆ, ಇವತ್ತು ರಾತ್ರಿ ನಿನ್ನನ್ನು ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಗೇಟಿನಿಂದ ಹೊರ ಹೋದರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


