Home Crime ಬಡ ಕುಟುಂಬದ ಜಾಗವನ್ನು ಜಾಯಿಂಟ್ ವೆಂಚರ್ ಗೆ ಪಡೆದು ಒಂದು ಮನೆಯನ್ನೂ ಕೊಡದೆ ಬೀದಿಗೆ ತಳ್ಳಿದ...

ಬಡ ಕುಟುಂಬದ ಜಾಗವನ್ನು ಜಾಯಿಂಟ್ ವೆಂಚರ್ ಗೆ ಪಡೆದು ಒಂದು ಮನೆಯನ್ನೂ ಕೊಡದೆ ಬೀದಿಗೆ ತಳ್ಳಿದ ಬಿಲ್ಡರ್ ವಿರುದ್ಧ ಎಫ್ಐಆರ್…!!

ಮಂಗಳೂರು: ನಗರದ ಅತ್ತಾವರ ಬಳಿಯ ಮಾರ್ನನಮಿಕಟ್ಟೆ ಸರ್ಕಲ್ ಬಳಿಯಲ್ಲಿ 16.75 ಸೆಂಟ್ಸ್ ಜಾಗವನ್ನು ಬಡ ಕುಟುಂಬದಿಂದ ಅಪಾರ್ಟ್ಮೆಂಟ್ ಕಟ್ಟುವ ಉದ್ದೇಶದಿಂದ ಪಡೆದಿದ್ದ ರಿಯಲ್ ಎಸ್ಟೇಟ್ ಬಿಲ್ಡರ್ ಒಬ್ಬರು ಅಲ್ಲಿ ಕಟ್ಟಡವನ್ನು ನಿರ್ಮಿಸಿದ್ದರೂ, ಕುಟುಂಬಕ್ಕೆ ಒಂದು ಮನೆಯನ್ನೂ ಕೊಡದೆ ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಬಿಲ್ಡರ್ ಡೊನಾಲ್ಡ್ ಪಿಂಟೋ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

66 ವರ್ಷದ ದೂರುದಾರ ಮಹಿಳೆ ಮತ್ತು ಅವರ ಕುಟುಂಬಸ್ಥರಿಗೆ ಸೇರಿದ ಭೂಮಿಯನ್ನು 2013ರಲ್ಲಿ ಡೊನಾಲ್ಡ್ ಪಿಂಟೋ ಕರಾರು ಪತ್ರದ ಮೂಲಕ ಪಡೆದಿದ್ದು, ಅದರಲ್ಲಿ ಅಪಾರ್ಟ್ಮೆಂಟ್ ಕಟ್ಟಿ ಎರಡು ಮನೆಗಳನ್ನು ದೂರುದಾರ ವಸಂತ ಎಂಬ ಮಹಿಳೆಗೆ ಮತ್ತು ಇನ್ನೊಂದು ಮನೆಯನ್ನು ಸಂಬಂಧಿ ವಸುಮತಿ ಎಂಬವರಿಗೆ ನೀಡುವುದಾಗಿ ಹೇಳಿ ಕರಾರು ಪತ್ರ ಮಾಡಲಾಗಿತ್ತು.

ಈ ಬಗ್ಗೆ 2013ರ ಮೇ 7ರಂದು ರೂಪಾಯಿ 99.90 ಲಕ್ಷಕ್ಕೆ ಕುಟುಂಬಸ್ಥರ ಹೆಸರಲ್ಲಿ ಕರಾರು ಪತ್ರ ಮಾಡಿದ್ದರೂ, ಉಪ ನೋಂದಣಿ ಕಚೇರಿಯಲ್ಲಿ ಮಹಿಳೆಗೆ ತಿಳಿಯದ ಇಂಗ್ಲಿಷ್ ಭಾಷೆಯಲ್ಲಿ ರೂ. 47 ಲಕ್ಷಕ್ಕೆ ಜಾಗ ಮಾರಾಟ ಮಾಡಿದ್ದಾಗಿ ರಿಜಿಸ್ಟರ್ ಮಾಡಿದ್ದರು. ಹಳೆ ಮನೆಯಿಂದ ಎಬ್ಬಿಸಿದ ನಂತರ ಬಡ ಕುಟುಂಬವನ್ನು ಬಾಡಿಗೆ ಮನೆಯಲ್ಲಿ ಇರಿಸಿ ಅದರ ಬಾಬ್ತು ನೀಡುವುದಾಗಿ ಹೇಳಿ ಬಿಲ್ಡರ್ ಪ್ರತ್ಯೇಕ ಕುಳ್ಳಿರಿಸಿದ್ದರು.

ಸದ್ರಿ ಜಾಗದಲ್ಲಿ 13 ವರ್ಷಗಳಲ್ಲಿ ನಾಲ್ಕು ಅಂತಸ್ತಿನ ಬೃಹತ್ ಅಪಾರ್ಟ್ಮೆಂಟ್ ಕಟ್ಟಡ ತಲೆಯೆತ್ತಿದ್ದು, ಅದರಲ್ಲಿ 12 ಫ್ಲಾಟ್ ಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ, ಕೆಳ ಅಂತಸ್ತಿನಲ್ಲಿ ರಸ್ತೆಯ ಭಾಗ ಇರುವುದರಿಂದ ಕಮರ್ಶಿಯಲ್ ಉದ್ದೇಶಕ್ಕೆ ಕೊಡಲಾಗಿದೆ. ಈ ವೇಳೆ, ಸಂತ್ರಸ್ತ ಕುಟುಂಬಕ್ಕೆ ಮನೆಯನ್ನು ಕೊಡಿಸುತ್ತೇನೆಂದು ನಂಬಿಸುತ್ತ ಬಂದಿದ್ದು, ಇಲ್ಲಿ ವರೆಗೂ ಯಾವುದೇ ಮನೆಯನ್ನು ನೀಡದೆ ಬಿಲ್ಡರ್ ಡೊನಾಲ್ಡ್ ಪಿಂಟೋ ವಂಚಿಸಿದ್ದಾರೆ.

ಅಲ್ಲದೆ, ಈವರೆಗೆ ಕೇವಲ 17 ಲಕ್ಷ ರೂ.ಗಳನ್ನು ಕಂತುಗಳ ರೂಪದಲ್ಲಿ ನೀಡಿದ್ದಾರೆ. ಬಾಡಿಗೆ ಮನೆ ಮಾಡಿಕೊಟ್ಟು ಸದರಿ ಬಾಡಿಗೆಯನ್ನೂ ನೀಡದೆ ವಂಚಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.