ಉಡುಪಿ: ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಕಟ್ಟೆ ಕ್ರಾಸ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 61 ವರ್ಷದ ಕುಯಿರ್ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದಿನಾಂಕ ಅಕ್ಟೋಬರ್ 20ರಂದು ಸಂಜೆ ಸುಮಾರು 6:30ರ ವೇಳೆಗೆ ಕುಯಿರ್ ನಾಯ್ಕ ಅವರು ಬೆಳ್ವೆಯಿಂದ ಗೊಳಿಯಂಗಡಿಗೆ ತೆರಳುವ ರಸ್ತೆಯ ಎಡಬದಿಯ ಮಣ್ಣುರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಬೆಳ್ವೆ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ KA-19-EE-6037 ನೋಂದಣಿ ಸಂಖ್ಯೆಯ ಮೋಟಾರು ಸೈಕಲ್ ಹಿಂದಿನಿಂದ ಅವರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ಕುಯಿರ್ ನಾಯ್ಕ ಹಾಗೂ ಬೈಕ್ ಸವಾರ ರಸ್ತೆಗೆ ಬಿದ್ದಿದ್ದು, ಕುಯಿರ್ ನಾಯ್ಕ ಅವರ ತಲೆಯ ಹಿಂಭಾಗ, ಎಡಗೈ ಹಾಗೂ ಎಡಗಾಲಿಗೆ ಗಾಯಗಳಾಗಿದ್ದವು. ಬೈಕ್ ಸವಾರನಿಗೂ ತರಚಿದ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳಿಗೆ ನೆರವು ನೀಡಿದ್ದು, ಕುಯಿರ್ ನಾಯ್ಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಅಕ್ಟೋಬರ್ 21ರಂದು ಚಿಕಿತ್ಸೆ ಫಲಕಾರಿಯಾಗದೆ ಕುಯಿರ್ ನಾಯ್ಕ ಮೃತಪಟ್ಟಿದ್ದಾರೆ. ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 72/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281 ಮತ್ತು 106ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



