Home Crime ಮಲ್ಪೆ: ಮೀನುಗಾರಿಕಾ ಬೋಟ್ ವ್ಯವಹಾರದ ಹೆಸರಿನಲ್ಲಿ ₹5 ಲಕ್ಷ ವಂಚನೆ ಆರೋಪ : ಪ್ರಕರಣ ದಾಖಲು…!!

ಮಲ್ಪೆ: ಮೀನುಗಾರಿಕಾ ಬೋಟ್ ವ್ಯವಹಾರದ ಹೆಸರಿನಲ್ಲಿ ₹5 ಲಕ್ಷ ವಂಚನೆ ಆರೋಪ : ಪ್ರಕರಣ ದಾಖಲು…!!

ಮಲ್ಪೆ: ಮೀನುಗಾರಿಕಾ ಬೋಟ್ ವ್ಯವಹಾರದಲ್ಲಿ ₹5 ಲಕ್ಷ ಮುಂಗಡ ಹಣ ಪಡೆದು, ಹಣವನ್ನು ಮರುಪಾವತಿಸದೆ ಹಾಗೂ ವ್ಯವಹಾರದ ಲೆಕ್ಕಪತ್ರ ನೀಡದೆ ವಂಚನೆ ಎಸಗಿರುವ ಆರೋಪದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ ಕೊಡವೂರು ಗ್ರಾಮದ ಕರುಣಾಕರ ಎಸ್. ಸಾಲ್ಯಾನ್ (51) ಅವರು ತಮ್ಮ ಪತ್ನಿಯ ಹೆಸರಿನಲ್ಲಿರುವ ‘ಶ್ರೀ ದುರ್ಗಾ ಪ್ರಸಾದ್’ ಎಂಬ ಮೀನುಗಾರಿಕಾ ಬೋಟ್‌ನಲ್ಲಿ ಮೀನುಗಾರಿಕೆ ವ್ಯವಹಾರ ನಡೆಸುತ್ತಿದ್ದರು. ಈ ಬೋಟ್‌ನಲ್ಲಿ ವನೋತನ್ ಥೋಮೈ ಎಂಬಾತ 2025ರ ಜುಲೈ ತಿಂಗಳಿನಿಂದ ತಾಂಡೇಲನಾಗಿ ಕೆಲಸ ಮಾಡುತ್ತಿದ್ದು, ಮೀನುಗಾರಿಕೆಯಿಂದ ಬಂದ ಲಾಭಾಂಶದ ಲೆಕ್ಕಾಚಾರ ಹಾಗೂ ಲೆಕ್ಕಪತ್ರಗಳ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಆರೋಪಿಯು ವೈಯಕ್ತಿಕ ಕಾರಣ ನೀಡಿ 2025ರ ಆಗಸ್ಟ್ ತಿಂಗಳಲ್ಲಿ ₹5 ಲಕ್ಷ ಮುಂಗಡ ಹಣ ಕೇಳಿದ್ದು, ಒಂದು ವರ್ಷದೊಳಗೆ ಮರುಪಾವತಿಸುವುದಾಗಿ ತಿಳಿಸಿದ್ದಾನೆ. ಅದರಂತೆ, 2025ರ ಆಗಸ್ಟ್ 18ರಂದು ದೂರುದಾರರು ಬ್ಯಾಂಕ್ ಮೂಲಕ ಆರೋಪಿಯ ಖಾತೆಗೆ ₹5 ಲಕ್ಷ ವರ್ಗಾಯಿಸಿದ್ದರು ಎನ್ನಲಾಗಿದೆ.

ಆದರೆ, ಆರೋಪಿಯು ಹಣವನ್ನು ಮರುಪಾವತಿಸದೆ, ಮೀನುಗಾರಿಕೆ ವ್ಯವಹಾರದ ಲೆಕ್ಕಾಚಾರವನ್ನೂ ನೀಡದೆ ಉದ್ದೇಶಪೂರ್ವಕವಾಗಿ ಹಣ ದುರುಪಯೋಗಪಡಿಸಿಕೊಂಡು ಯಾವುದೇ ಮಾಹಿತಿ ನೀಡದೆ ಊರಿಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿನ ಆಧಾರದಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 314, 316, 318(4) ಹಾಗೂ 324ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.