ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮರೀಲ್ ಸಮೀಪದ ಚಾಕೊಲೇಟ್ ಫ್ಯಾಕ್ಟರಿ ಬಳಿಯ ಬಸ್ ತಂಗುದಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ್ದ ಆರೋಪದ ಮೇಲೆ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಿನಾಂಕ 2 ಜುಲೈ 2026ರಂದು ಮಧ್ಯಾಹ್ನ ಸುಮಾರು 12:45ಕ್ಕೆ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ.ಸು) ಸುರೇಶ್ ಸಿ.ಟಿ. ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದರು. ಈ ವೇಳೆ ಪೊಲೀಸರು ಬರುತ್ತಿರುವುದನ್ನು ಕಂಡು ಇಬ್ಬರು ಪರಾರಿಯಾಗಲು ಯತ್ನಿಸಿದ್ದು, ಸಿಬ್ಬಂದಿಯ ಸಹಾಯದಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ಬಂಧಿತರು ಸಪ್ವಾನ್ ಮಹಮ್ಮದ್ (31) ಹಾಗೂ ಮಹಮ್ಮದ್ ಝೈನ್ ಪಿ.ಕೆ. (26) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಸಪ್ವಾನ್ ಮಹಮ್ಮದ್ ಅವರಲ್ಲಿ Amphetamines ಹಾಗೂ ಮಹಮ್ಮದ್ ಝೈನ್ ಅವರಲ್ಲಿ Tetrahydrocannabinol (THC) ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2026ರಡಿ ಎನ್‌ಡಿಪಿಎಸ್ ಕಾಯ್ದೆ ಕಲಂ 27(b) ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




