ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿಯಿಂದ ಬ್ರಹ್ಮಾವರಕ್ಕೆ ತೆರಳುವ ಮಾರ್ಗದ ಹುತ್ತುರ್ಕೆ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.
ಮೃತರನ್ನು ಸದಾನಂದ ನಾಯಕ್(55) ಎಂದು ಗುರುತಿಸಲಾಗಿದೆ.
ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕನ ಮೃತದೇಹ ಕಾರಿನೊಳಗೆ ಸಿಲುಕಿಕೊಂಡಿದೆ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿದ್ದು, ಕಾರಿನ ಮೇಲಿದ್ದ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ಮರ ತೆರವುಗೊಳಿಸಿದ ಬಳಿಕವಷ್ಟೇ ಮೃತದೇಹವನ್ನು ಕಾರಿನಿಂದ ಹೊರತೆಗೆಯಲು ಸಾಧ್ಯವಾಗಲಿದೆ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.




