ಉಡುಪಿ, ಅಕ್ಟೋಬರ್ 10: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 21ರವರೆಗೆ ನಡೆಯಲಿರುವ 5ನೇ ವರ್ಷದ ಉಡುಪಿ-ಉಚ್ಚಿಲ ದಸರಾ 2026ರ ಪ್ರಯುಕ್ತ ನಿರ್ಮಿಸಲಾದ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಅವರು ಶನಿವಾರ ಸಂಜೆ ಉದ್ಘಾಟಿಸಿದರು.
ಉಚ್ಚಿಲ ದೇವಸ್ಥಾನದ ಪರಿಸರದಿಂದ ಪಡುಬಿದ್ರಿಯಿಂದ ಕಾಪು ಸಮುದ್ರ ತೀರದವರೆಗೆ ಸುಮಾರು 10 ಕಿ.ಮೀ. ಉದ್ದಕ್ಕೆ ಕಣ್ಮನ ಸೆಳೆಯುವ ದೀಪಾಲಂಕಾರ ಮಾಡಲಾಗಿದ್ದು, ದಸರಾ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ.
ಅಕ್ಟೋಬರ್ 11 ರಿಂದ 21ರವರೆಗೆ ವೈಭವದ ದಸರಾ:
ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಕ್ತಾಭಿಮಾನಿಗಳು ಹಾಗೂ ಮೊಗವೀರ ಸಮಾಜದ ಸಹಕಾರದಲ್ಲಿ ದಸರಾ ಆಯೋಜಿಸಲಾಗಿದೆ.
ಅ. 11ರಂದು ಬೆಳಿಗ್ಗೆ 9 ಗಂಟೆಗೆ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಮತ್ತು ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ನವದುರ್ಗೆಯರು ಹಾಗೂ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದೆ. ಬೆಳಿಗ್ಗೆ 10:30ಕ್ಕೆ ಸಚಿವ ಕೆ.ಎಸ್. ಬಸವಂತಪ್ಪ ದಸರಾ ಉದ್ಘಾಟಿಸಲಿದ್ದಾರೆ.
ಪ್ರತಿದಿನ ಚಂಡಿಕಾಹೋಮ, ಅನ್ನಸಂತರ್ಪಣೆ, ಕುಂಕುಮಾರ್ಚನೆ, ಭಜನೆ, ಧಾರ್ಮಿಕ ಸಭೆ ನಡೆಯಲಿದ್ದು, ಮತ್ಸ್ಯದ್ವಾರ, ದವಸ-ಧಾನ್ಯಗಳ ಕಲಾಕೃತಿಗಳು, ಜೀವಂತ ಮೀನು ಪ್ರದರ್ಶನ, ಯಕ್ಷಗಾನ ಕಲಾಕೃತಿ ಸೇರಿದಂತೆ ವೈವಿಧ್ಯಮಯ ವಸ್ತು ಪ್ರದರ್ಶನಗಳಿವೆ.
ಅ.12ರಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಮಹಿಳಾ ದಸರಾ ಉದ್ಘಾಟನೆ ಮತ್ತು ತುಳುವಿಗೆ 2ನೇ ಆಡಳಿತ ಭಾಷಾ ಸ್ಥಾನಮಾನ ನೀಡಿದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಅ.21ರಂದು ಭವ್ಯ ಶೋಭಾಯಾತ್ರೆ ಕಾಪು ಬೀಚ್‌ನಲ್ಲಿ ಸಮುದ್ರದಲ್ಲಿ ಜಲಸ್ತಂಭನದೊಂದಿಗೆ ಮುಕ್ತಾಯಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ,ರತ್ನಾಕರ್ ಸಾಲ್ಯನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.







